ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ ನಿಧನದ ಹಿನ್ನೆಲೆಯಲ್ಲಿ ಬುಧವಾರ (ಏಪ್ರಿಲ್ 17) ಅರ್ಧ ದಿನ ಚಿತ್ರೋದ್ಯಮ ಬಂದ್ ಆಚರಿಸಲಾಗುವುದು.
ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಚಂದ್ರಶೇಖರ್ ಮಂಗಳವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ್ದಾರೆ.
ಬುಧವಾರ ಮಧ್ಯಾಹ್ನದವರೆಗೂ ಯಾವುದೇ ಚಿತ್ರೀಕರಣ ನಡೆಯುವುದಿಲ್ಲ ಹಾಗೂ ಮಾರ್ನಿಂಗ್ ಶೋಗಳು ಇರುವುದಿಲ್ಲ. ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲೂ ನಾಳೆ ಮಾರ್ನಿಂಗ್ ಶೋ ಇರುವುದಿಲ್ಲ ಎಂದು ಅವರು ಹೇಳಿದರು.
ದ್ವಾರಕೀಶ್ ಮಂಗಳವಾರ ಬೆಳಿಗ್ಗೆ ಕಾಫಿ ಕುಡಿದು ಮಲಗಿದವರು ಮೇಲೆ ಏಳಲೇ ಇಲ್ಲ. 81 ವರ್ಷದ ಹಿರಿಯ ಕಲಾವಿದ ಸ್ವಗೃಹದಲ್ಲಿ ಬೆಳಿಗ್ಗೆ 11 ಗಂಟೆ ಸುಮಾರಿಗೆ ಉಸಿರಾಟ ನಿಲ್ಲಿಸಿದರು.



