1224 ಪೌಂಡ್ (555) ತೂಕದ ಬೃಹತ್ ಕುಂಬಳಕಾಯಿಯಲ್ಲಿ ಬೋಟ್ ನಿರ್ಮಿಸಿದ ಅಮೆರಿಕದ ಗ್ಯಾರಿ ಕ್ರಿಸ್ಟಿನ್ಸೆನ್ ಕೊಲಂಬಿಯಾ ನದಿಯಲ್ಲಿ 73.5 ಕಿ.ಮೀ. ಸಂಚರಿಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ.
46 ವರ್ಷದ ಗ್ಯಾರಿ ಕ್ರಿಸ್ಟಿನ್ಸೆನ್ ಅಕ್ಟೋಬರ್ 12ರಿಂದ 13ರವರೆಗೆ ಸ್ವತಃ ಕೈಯಿಂದ `ಪಂಕಿ ಲೋಫಸ್ಟರ್’ ಹೆಸರಿನ ಕುಂಬಳಕಾಯಿ ಬೋಟ್ ನಿರ್ಮಿಸಿದ್ದಾರೆ.
ಕುಂಬಳಕಾಯಿ ಬೋಟ್ ನಲ್ಲಿ ವಾಷಿಂಗ್ಟನ್ ನ ಉತ್ತರ ಬೊನ್ನೆವೆಲ್ಲಿಯಿಂದ ವೆಂಕೋವರ್ ವರೆಗೆ 73.5 ಕಿ.ಮೀ. ದೂರದವರೆಗೆ ಪ್ರಯಾಣಿಸಿದ್ದಾರೆ. ಈ ಮೂಲಕ 26 ಗಂಟೆಗಳ ಕಾಲ ಬೋಟ್ ನಲ್ಲಿ ತಂಗಿದ್ದು, ಕುಂಬಳಕಾಯಿ ಬೋಟ್ ನಲ್ಲಿ ಇಷ್ಟು ದೂರ ಸಾಗಿದ ವಿಶ್ವದಾಖಲೆಯನ್ನು ಗ್ಯಾರಿ ನಿರ್ಮಿಸಿದ್ದಾರೆ.
ಗ್ಯಾರಿ 2011ರಿಂದ ಬೃಹತ್ ಕುಂಬಳಕಾಯಿ ಬೆಳೆಯುತ್ತಾ ಬಂದಿದ್ದಾರೆ. 2013ರಲ್ಲಿ ಈ ರೀತಿ ಬೆಳೆದ ಬೃಹತ್ ಕುಂಬಳಕಾಯಿ ಮೂಲಕ ದೋಣಿ ನಿರ್ಮಿಸಲು ಆರಂಭಿಸಿದರು. ಕಳೆದ ನಾಲ್ಕು ವರ್ಷಗಳಿಂದ ಸತತ ಪ್ರಯತ್ನ ಮಾಡುತ್ತಿರುವ ಗ್ಯಾರಿ ಈ ಬಾರಿ ವಿಶ್ವದಾಖಲೆ ಬರೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಬಾರಿ ಬೋಟ್ ನಿರ್ಮಿಸಲು ಸೂಕ್ತವಾದ ಬೃಹತ್ ಕುಂಬಳಕಾಯಿ ಬೆಳೆಯುವಲ್ಲಿ ಯಶಸ್ವಿಯಾದೆ. ಜುಲೈ 14ರಂದು ಪ್ರಯತ್ನ ಆರಂಭಿಸಿದರು. ಕೊನೆಗೆ ತೂಕ ಹಾಕಿ ಬೃಹತ್ ಕುಂಬಳಕಾಯಿಯಲ್ಲಿ ಕೂರಲು ಸಾಕಾಗುವಷ್ಟು ದೋಣಿ ನಿರ್ಮಿಸಿ ಪ್ರಯಾಣಿಸಿದ್ದಾರೆ.
ಕುಂಬಳಕಾಯಿ ಬೋಟ್ 429.26 ಸೆಂಟಿಮೀಟರ್ ಸುತ್ತಳತೆ ಹೊಂದಿದ್ದು, 555.2 ಕೆಜಿ ತೂಕ ಹೊಂದಿದೆ. ನದಿಯಲ್ಲಿ ಪ್ರಯಾಣ ಆರಂಭಿಸಿದ ಕೆಲವು ನಿಮಿಷಗಳ ನಂತರ ಗಾಳಿ ವೇಗವಾಗಿ ಬೀಸಿದ್ದರಿಂದ ಗಂಟೆಗೆ 35 ಕಿ.ಮೀ. ವೇಗದಲ್ಲಿ ಬೋಟ್ ನಲ್ಲಿ ಗ್ಯಾರಿ ಪ್ರಯಾಣಿಸಿ ಸಾಹಸ ಮೆರೆದಿದ್ದಾರೆ.