ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕನೇ ಹಾಗೂ ಅಂತಿಮ ಟಿ-20 ಪಂದ್ಯದಲ್ಲಿ ಸಿಡಿಲಬ್ಬದ ದ್ವಿಶತಕದ ಜೊತೆಯಾಟದಿಂದ ಭಾರತಕ್ಕೆ 135 ರನ್ ಗೆಲುವಿನ ಜೊತೆಗೆ 3-1ರಿಂದ ಸರಣಿ ಗೆಲುವು ತಂದುಕೊಟ್ಟ ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ ಜೋಡಿ ಹಲವು ದಾಖಲೆಗಳನ್ನು ಧೂಳೀಪಟ ಮಾಡಿದೆ.
ಜೊಹಾನ್ಸ್ ಬರ್ಗ್ ಮೈದಾನದಲ್ಲಿ ಶುಕ್ರವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ ವೈಯಕ್ತಿಕ ಶತಕಗಳನ್ನು ದಾಖಲಿಸಿದ್ದೂ ಅಲ್ಲದೇ ದ್ವಿಶತಕದ [210] ಜೊತೆಯಾಟ ನಿಭಾಯಿಸಿದರು. ಇವರಿಬ್ಬರ ಜೊತೆಯಾಟದಿಂದ ಭಾರತ 20 ಕ್ರಿಕೆಟ್ ನಲ್ಲಿ 1 ವಿಕೆಟ್ ಕಳೆದುಕೊಂಡು 283ರನ್ ಕಲೆ ಹಾಕಿತು.
ಎರಡನೇ ವಿಕೆಟ್ ಗೆ ಸ್ಯಾಮ್ಸನ್ ಮತ್ತು ತಿಲಕ್ 210 ರನ್ ಜೊತೆಯಾಟ ದಕ್ಷಿಣ ಆಫ್ರಿಕಾ ನೆಲದಲ್ಲಿ ಅತೀ ದೊಡ್ಡ ಜೊತೆಯಾಟವಾಗಿದೆ. ಅಲ್ಲದೇ 2ನೇ ವಿಕೆಟ್ ನಂತರದ ಯಾವುದೇ ವಿಕೆಟ್ ಗೆ ದಾಖಲಾದ ಅತೀ ದೊಡ್ಡ ಜೊತೆಯಾಟವಾಗಿದೆ.
ಭಾರತದ ಪರ ಯಾವುದೇ ವಿಕೆಟ್ ಗೆ ಬಂದ ಅತೀ ದೊಡ್ಡ ಜೊತೆಯಾಟ ಇದಾಗಿದ್ದು, ಭಾರತ 1 ವಿಕೆಟ್ ಗೆ 283 ರನ್ ಮೊತ್ತ ಕಲೆ ಹಾಕಿರುವುದು ವಿದೇಶೀ ನೆಲದಲ್ಲಿ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ದಾಖಲಾದ ಅತೀ ದೊಡ್ಡ ಮೊತ್ತವಾಗಿದೆ.
ಸ್ಯಾಮ್ಸನ್ 56 ಎಸೆತಗಳಲ್ಲಿ ಅಜೇಯ 109 ರನ್ ಗಳಿಸುವ ಮೂಲಕ ಕಳೆದ 5 ಇನಿಂಗ್ಸ್ ಗಳಲ್ಲಿ ಗಳಿಸಿದ ಮೂರನೇ ಶತಕವಾಗಿದೆ. ವಿಚಿತ್ರ ಅಂದರೆ ಉಳಿದೆರಡು ಪಂದ್ಯಗಳಲ್ಲಿ ಶೂನ್ಯ ಸುತ್ತಿರುವುದು. ಅಲ್ಲದೇ ದಕ್ಷಿಣ ಆಫ್ರಿಕಾ ನೆಲದಲ್ಲಿ ಎರಡು ಶತಕ ಗಳಿಸಿದ ಆಟಗಾರ ಎನಿಸಿಕೊಂಡರು.
ತಿಲಕ್ ವರ್ಮಾ 47 ಎಸೆತಗಳಲ್ಲಿ 120 ರನ್ ಸಿಡಿಸಿ ಸತತ 2ನೇ ಹಾಗೂ ದಕ್ಷಿಣ ಆಫ್ರಿಕಾ ನೆಲದಲ್ಲಿ ಸತತ 2 ಶತಕ ಸಿಡಿಸಿದ ಮೊದಲ ಆಟಗಾರ ಎಂಬ ದಾಖಲೆಗೆ ಪಾತ್ರರಾದರು. ಕಳೆದ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ತಿಲಕ್ ವರ್ಮಾ ಮೊದಲ ಎಸೆತದಲ್ಲೇ ಶೂನ್ಯಕ್ಕೆ ಔಟಾಗಿದ್ದರು.