ಶಾಲೆಗೆ ತಡವಾಗಿ ಬಂದ 18 ವಿದ್ಯಾರ್ಥಿನಿಯರ ತಲೆಗೂದಲನ್ನು ಶಿಕ್ಷಕಿ ಕತ್ತರಿಸಿದ ಆಘಾತಕಾರಿ ಘಟನೆ ಆಂಧ್ರಪ್ರದೇಶದ ಅಲ್ಲುರಿ ಸೀತರಾಮರಾಜು ಜಿಲ್ಲೆಯಲ್ಲಿ ನಡೆದಿದೆ.
ಕಸ್ತೂರ್ಬಾ ಗಾಂಧಿ ಬಾಲಿಕಾ ವಿದ್ಯಾಲಯ ವಸತಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಶಾಲೆ ಆರಂಭದ ವೇಳೆ ನಡೆಯುವ ಅಸೆಂಬ್ಲಿಗೆ ತಡವಾಗಿ ಬಂದಿದ್ದಕ್ಕೆ ಈ ಕೃತ್ಯ ಎಸಗಲಾಗಿದೆ.
ಶಾಲೆಯ ಸುರಕ್ಷತೆ, ಮಕ್ಕಳ ಶಿಸ್ತು ವಿಭಾಗದ ಮುಖ್ಯಸ್ಥರಾದ ಶಿಕ್ಷಕ ಸಾಯಿ ಪ್ರಸನ್ನ ಮಕ್ಕಳ ತಲೆಗೂದಲು ಕತ್ತರಿಸಿ ವಿಕೃತಿ ಮೆರೆದಿದ್ದಾನೆ.
ವಸತಿ ಶಾಲೆಯಲ್ಲಿ ನೀರಿನ ಸಮಸ್ಯೆ ಉಂಟಾಗಿದ್ದರಿಂದ ವಿದ್ಯಾರ್ಥಿನಿಯರ ಶಾಲೆಗೆ ಬರುವುದು ತಡವಾಗಿದೆ. ಆದರೆ ಸಮಸ್ಯೆ ಅರಿಯದೇ ಶಿಕ್ಷಕಿ 18 ಹೆಣ್ಣು ಮಕ್ಕಳ ತಲೆಗೂದಲು ಕತ್ತರಿಸಿ ಅಪಮಾನಿಸಿದ್ದಾರೆ.
ತಲೆಗೂದಲು ಕತ್ತರಿಸಿದ್ದೂ ಅಲ್ಲದೇ ಕೆಲವು ಮಕ್ಕಳ ಮೇಲೆ ಹಲ್ಲೆ ನಡೆಸಿದರೆ ಇನ್ನೂ ಕೆಲವು ಮಕ್ಕಳನ್ನು ಬಿಸಿಲಿನಲ್ಲಿ ಕೆಲವು ಸಮಯ ನಿಲ್ಲಿಸುವ ಶಿಕ್ಷೆ ವಿಧಿಸಿದ್ದಾರೆ.
ಶಿಕ್ಷೆ ವಿಧಿಸಿದ ಬಗ್ಗೆ ಯಾರ ಬಳಿಯೂ ಬಾಯಿ ಬಿಡಬಾರದು ಎಂದು ಮಕ್ಕಳಿಗೆ ಶಿಕ್ಷಕಿ ಧಮ್ಕಿ ಹಾಕಿದ್ದಾರೆ. ಆದರೆ ಮಕ್ಕಳು ಪೋಷಕರ ಬಳಿ ಹೇಳಿಕೊಂಡಿದ್ದರಿಂದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಆದರೆ ಶಿಕ್ಷಕಿ ತನ್ನ ವರ್ತನೆಯನ್ನು ಸಮರ್ಥಿಸಿಕೊಂಡಿದ್ದು, ಮಕ್ಕಳಲ್ಲಿ ಶಿಸ್ತು ಕಾಪಾಡುವ ಮುಖ್ಯಸ್ಥೆ ಆಗಿರುವ ಕಾರಣ ಶಿಸ್ತು ಕಾಪಾಡಲು ಶಿಕ್ಷೆ ನೀಡಿದ್ದೇನೆ ಎಂದು ಹೇಳಿದ್ದಾರೆ.