ಪಾಕಿಸ್ತಾನಿಯರು ಸೇರಿದಂತೆ 100ಕ್ಕೂ ಹೆಚ್ಚು ವಿದೇಶೀಯರನ್ನು ಸೌದಿ ಅರೆಬಿಯಾ ಸರ್ಕಾರ ಒಂದೇ ವರ್ಷದಲ್ಲಿ ಗಲ್ಲಿಗೇರಿಸಿದೆ.
ಕಳೆದೆರಡು ವರ್ಷಗಳಿಗೆ ಹೋಲಿಸಿದರೆ ಸೌದಿ ಅರೆಬಿಯಾದಲ್ಲಿ ವಿದೇಶೀಯರನ್ನು ವಿವಿಧ ಪ್ರಕರಣಗಳಲ್ಲಿ ಗಲ್ಲಿಗೇರಿಸಿದ ಪ್ರಮಾಣ ಮೂರು ಪಟ್ಟು ಹೆಚ್ಚಳವಾಗಿದ್ದು, ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಆಘಾತ ವ್ಯಕ್ತಪಡಿಸಿದೆ.
2024ರ ಒಂದೇ ವರ್ಷದಲ್ಲಿ 101 ವಿದೇಶೀಯರನ್ನು ಗಲ್ಲಿಗೇರಿಸಲಾಗಿದೆ. 2022 ಮತ್ತು 2023ರಲ್ಲಿ ತಲಾ 34 ಜನರನ್ನು ಗಲ್ಲಿಗೇರಿಸಲಾಗಿತ್ತು.
ಪಾಕಿಸ್ತಾನದ 21, ಯೆಮೆನ್ 20, ಸಿರಿಯಾ 14, ನೈಜಿರಿಯಾ 10, ಈಜಿಪ್ಟ್ 9, ಜೋರ್ಡಾನ್ 8, ಇಥಿಯೋಪಿಯಾದ 7, ಸುಡಾನ್, ಭಾರತ, ಆಫ್ಘಾನಿಸ್ತಾನದ ತಲಾ ಇಬ್ಬರು, ಶ್ರೀಲಂಕಾ, ಎರಿಟ್ರಿಯಾ ಮತ್ತು ಫಿಲಿಪ್ಪೆನ್ಸ್ ನ ತಲಾ ಒಬ್ಬರನ್ನು ಗಲ್ಲಿಗೇರಿಸಲಾಗಿದೆ.
ಸೌದಿ ಅರೆಬಿಯಾದಲ್ಲಿ ಡ್ರಗ್ಸ್ ನಿಯಂತ್ರಣಕ್ಕೆ ಗಲ್ಲಿಗೇರಿಸುವ ಕಠಿಣ ಶಿಕ್ಷೆ ವಿಧಿಸಲಾಗುತ್ತಿದೆ. ಡ್ರಗ್ಸ್ ಗೆ ಸಂಬಂಧಿಸಿದ 92 ಪ್ರಕರಣಗಳಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗಿದ್ದು, ಇದರಲ್ಲಿ 69 ಪ್ರಕರಣಗಳು ವಿದೇಶೀಯರಿಗೆ ಸೇರಿದ್ದಾಗಿದೆ.
ಡ್ರಗ್ಸ್ ಪ್ರಕರಣದಲ್ಲಿ ವಿದೇಶೀಯರ ಗುಂಪು ದೊಡ್ಡ ಮಟ್ಟದಲ್ಲಿ ಕೆಲಸ ಮಾಡುತ್ತಿದೆ. ಇದನ್ನು ತಡೆಯಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಗಲ್ಲು ಶಿಕ್ಷೆ ಕೊನೆಯ ಹಂತದ ಶಿಕ್ಷೆಯಾಗಿದೆ ಎಂದು ಸೌದಿ ಅರೆಬಿಯಾದ ಕಾನೂನು ನಿರ್ದೇಶಕ ತಾಹಾ ಅಲ್- ಹಾಜಿ ತಿಳಿಸಿದ್ದಾರೆ.