ಅಮೆರಿಕದ ಮಧ್ಯಸ್ಥಿಕೆ ಹಿನ್ನೆಲೆಯಲ್ಲಿ ಇಸ್ರೇಲ್ ಮತ್ತು ಹಿಜ್ ಬುಲ್ಲಾ 60 ದಿನಗಳ ಕಾಲ ಕದನ ವಿರಾಮ ಘೋಷಿಸಿದೆ.
ಅಮೆರಿಕದ ಮಧ್ಯಸ್ಥಿಕೆಯಲ್ಲಿ ಲೆಬನಾನ್ ಮೂಲದ ಹಿಜ್ಬುಲ್ಲಾ ಜೊತೆಗೆ ಕದನ ವಿರಾಮ ಒಪ್ಪಂದಕ್ಕೆ ಇಸ್ರೇಲ್ ಒಪ್ಪಿಕೊಂಡಿದ್ದು, ಇದು ಬುಧವಾರ ಮುಂಜಾನೆಯಿಂದ (ಇಸ್ರೇಲ್ ಸಮಯ) ಜಾರಿಗೆ ಬಂದಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬಿಡೈನ್ ಘೋಷಿಸಿದ್ದಾರೆ.
ಹಿಜ್ ಬುಲ್ಲಾ ನಾಯಕರು ಒಪ್ಪಂದಕ್ಕೆ ಪ್ರಾಥಮಿಕ ಬೆಂಬಲವನ್ನು ಸೂಚಿಸಿದ್ದಾರೆ. ಈ ಮೂಲಕ ಎರಡೂ ದೇಶಗಳ ಪ್ರತಿನಿಧಿಗಳು ಯುದ್ಧದಿಂದ ಹಿಂದೆ ಸರಿಯುವ ನಿರ್ಣಾಯಕ ಹಂತಕ್ಕೆ ತಲುಪಿವೆ. ಒಪ್ಪಂದದ ಪ್ರಕಾರ, 60 ದಿನಗಳ ಕಾಲ ಕದನ ವಿರಾಮ ಜಾರಿಯಲ್ಲಿ ಇರಲಿದೆ. ಇಸ್ರೇಲಿ ಪಡೆಗಳು ಲೆಬನಾನ್ನಿಂದ ಹಿಂದೆ ಸರಿಯಬೇಕು ಮತ್ತು ಹಿಜ್ಬುಲ್ಲಾ ದಕ್ಷಿಣ ಲೆಬನಾನ್ ನಿಂದ ಹಿಂದೆ ಸರಿಯಬೇಕೆಂಬ ಷರತ್ತು ವಿಧಿಸಲಾಗಿದೆ.
ಹಿಜ್ ಬುಲ್ಲಾ ಒಪ್ಪಂದವನ್ನು ಉಲ್ಲಂಘಿಸಿದರೆ ಅದರ ವಿರುದ್ಧ ಮತ್ತೆ ಕ್ರಮ ಕೈಗೊಳ್ಳುವ ಹಕ್ಕು ತನಗಿರಬೇಕೆಂದು ಇಸ್ರೇಲ್ ಒತ್ತಾಯಿಸಿದೆ. ಆದರೆ ಲೆಬನಾನ್ ಈ ನಿಬಂಧನೆಯನ್ನು ವಿರೋಧಿಸಿದೆ.
ಇದಕ್ಕೂ ಮುನ್ನ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಲೆಬನಾನ್ ನ ಹಿಜ್ ಬುಲ್ಲಾದೊಂದಿಗೆ ಅಮೆರಿಕ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಒಪ್ಪಂದಕ್ಕೆ ಬರಲು ತಮ್ಮ ಸಂಪುಟಗೆ ಶಿಫಾರಸು ಮಾಡುವುದಾಗಿ ಹೇಳಿದ್ದರು.
ಇಸ್ರೇಲ್ ಮತ್ತು ಹಿಜ್ಬುಲ್ಲಾ ಸಂಘರ್ಷದಿಂದ 1.2 ದಶಲಕ್ಷ ಲೆಬನಾನ್ ಜನತೆ ಮತ್ತು 50,000 ಇಸ್ರೇಲಿಗಳು ಸ್ಥಳಾಂತರಗೊಂಡಿದ್ದಾರೆ. ಇಸ್ರೇಲ್‌ನ ಭಾರಿ ಬಾಂಬ್ ದಾಳಿಯಿಂದ ಲೆಬನಾನಿನಲ್ಲಿ 3700ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ. ಇದರಲ್ಲಿ ಹೆಚ್ಚಿನವರು ನಾಗರಿಕರು ಎಂದು ಲೆಬನಾನ್ ಅಧಿಕಾರಿಗಳು ತಿಳಿಸಿದ್ದಾರೆ.
ಒಪ್ಪಂದದ ಪ್ರಕಾರ 60 ದಿನಗಳ ಕಾಲ ಕದನ ವಿರಾಮ ಜಾರಿಯಲ್ಲಿರುತ್ತದೆ. ಈ ಸಮಯದಲ್ಲಿ ಇಸ್ರೇಲಿ ಪಡೆಗಳು ಗಡಿಯ ತಮ್ಮ ಭಾಗಕ್ಕೆ ಹಿಂತಿರುಗುತ್ತವೆ ಮತ್ತು ಹಿಜ್ಬುಲ್ಲಾ ದಕ್ಷಿಣ ಲೆಬನಾನ್ನ ಹೆಚ್ಚಿನ ಭಾಗಗಳಲ್ಲಿ ತನ್ನ ಮಿಲಿಟರಿ ಉಪಸ್ಥಿತಿಯನ್ನು ಹಿಂಪಡೆಯಲಿದೆ.
ಲಿಟಾನಿ ನದಿಯ ದಕ್ಷಿಣದ ಪ್ರದೇಶದಲ್ಲಿ ಸಾವಿರಾರು ಲೆಬನಾನ್ ಸೈನಿಕರು ಮತ್ತು ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗಳನ್ನು ನಿಯೋಜಿಸಲು ಒಪ್ಪಿಕೊಳ್ಳಲಾಗಿದೆ.