ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೊಸದಾಗಿ ಹಿಂದಿ ಭಾಷೆಯಲ್ಲಿ ಎಕ್ಸ್ ಖಾತೆ ಆರಂಭಿಸಿರುವುದು ಭಾಷಾ ಹೋರಾಟಕ್ಕೆ ಕಿಚ್ಚು ಹಬ್ಬಿಸಿದ್ದು, ಕನ್ನಡಿಗರು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಭಾಷಾ ತಾರತಮ್ಯ ಹೋರಾಟ ಹಾಗೂ ಹಿಂದಿ ಹೇರಿಕೆ ವಿರುದ್ಧ ಹೋರಾಟಗಳು ನಡೆಯುತ್ತಿದ್ದು, ಸಾಮಾಜಿಕ ಜಾಲತಾಣ ಪ್ರಮುಖ ವೇದಿಕೆಯಾಗಿ ಮಾರ್ಪಟ್ಟಿದೆ. ಇದಕ್ಕೆ ಈಗ ಆರ್ ಸಿಬಿ ಕೂಡ ಸೇರ್ಪಡೆಯಾಗಿದ್ದು ಕನ್ನಡಿಗರ ಕೆಂಗೆಣ್ಣಿಗೆ ಗುರಿಯಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಟಿ-೨೦ ಟೂರ್ನಿಯ ಬೆಂಗಳೂರನ್ನು ಪ್ರತಿನಿಧಿಸುತ್ತದೆ. ಕರ್ನಾಟಕ ರಾಜಧಾನಿ ಬೆಂಗಳೂರು ಕನ್ನಡಿಗರ ಮನೆ ಮಾತು. ಆರ್ ಸಿಬಿ ತಂಡದಲ್ಲಿ ಕನ್ನಡಿಗ ಆಟಗಾರರೇ ಇಲ್ಲ ಎಂಬ ಅಪವಾದ ಹೊತ್ತಿರುವ ಆರ್ ಸಿಬಿಗೆ ಇದೀಗ ಕನ್ನಡಿಗರ ಆಕ್ರೋಶಕ್ಕೂ ಗುರಿಯಾಗಿದೆ.
ಇಂಗ್ಲೀಷ್ ಮತ್ತು ಕನ್ನಡ ಎಕ್ಸ್ ಖಾತೆ ಹೊಂದಿರುವ ಆರ್ ಸಿಬಿ ಭಾನುವಾರ ಹಿಂದಿ ಭಾಷೆಯಲ್ಲಿ ಎಕ್ಸ್ ಖಾತೆ ಆರಂಭಿಸಿದೆ. ಎಕ್ಸ್ ನಲ್ಲಿ ಹಿಂದಿ ಖಾತೆ ತೆರೆಯುವ ಮೂಲಕ ಆರ್ ಸಿಬಿ ಕನ್ನಡಿಗರ ಮೇಲೆ ಹಿಂದಿ ಹೇರಲು ಪ್ರಯತ್ನಿಸುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ಆರ್ ಸಿಬಿ ಪ್ರಕಟಿಸಿದ ಮೊದಲ ವೀಡಿಯೊದಲ್ಲಿ ವಿರಾಟ್ ಕೊಹ್ಲಿ ಹಿಂದಿಯಲ್ಲಿ ಮಾತನಾಡಿರುವ ವೀಡಿಯೋ ಪೋಸ್ಟ್ ಮಾಡಲಾಗಿದ್ದು, ಆರ್ ಸಿಬಿ ಪರ ಆಡಲು ಎಷ್ಟು ಹೆಮ್ಮೆ ಆಗುತ್ತದೆ ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ ಮುಂದಿನ ದಿನಗಳಲ್ಲಿ ಹಿಂದಿಯಲ್ಲೂ ವೀಡಿಯೊಗಳು ಕೂಡ ಲಭ್ಯವಾಗಲಿದೆ ಎಂದು ಆರ್ ಸಿಬಿ ಹೇಳಿಕೊಂಡಿದೆ.
ಆರ್ ಸಿಬಿ ಹಿಂದಿ ಖಾತೆ ತೆರೆದಿರುವುದಕ್ಕೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಈ ಮೂಲಕ ಆರ್ ಸಿಬಿ ಕನ್ನಡಿಗರನ್ನು ಅಪಮಾನಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರೆ ,ಇನ್ನು ಕೆಲವರು ಉತ್ತರ ಭಾರತಕ್ಕೆ ತೊಲಗಿ ಎಂದು ಟೀಕಿಸಿದ್ದಾರೆ.
ಇನ್ನು ಕೆಲವರು ಕೂಡಲೇ ಹಿಂದಿ ಎಕ್ಸ್ ಖಾತೆ ರದ್ದು ಮಾಡಬೇಕು ಎಂದು ಆಗ್ರಹಿಸಿದರೆ, ಹಿಂದಿ ಭಾಷೆಯಲ್ಲಿ ಈಗ ಖಾತೆ ತೆರೆಯುವ ಅವಶ್ಯಕತೆ ಏನಿದೆ ಎಂದು ಪ್ರಶ್ನಿಸಿದೆ.
ಕೆಲವರು ಹಿಂದಿ ಖಾತೆ ತೆರೆದಿದ್ದರಿಂದ ಹೆಚ್ಚು ಜನರನ್ನು ತಲುಪಬಹುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಹಿಂದಿ ಖಾತೆಗೆ ವಿರೋಧಿಸುವವರು ಭಾಷಾ ತಾರಾತಮ್ಯದ ಮಾಡುವವರು ಎಂದು ಆರೋಪಿಸಿದ್ದಾರೆ.