ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸಚಿವ ಸಂಪುಟ ಪುನರಚನೆ ನಡೆಯುವುದು ಬಹುತೇಕ ಖಚಿತವಾಗಿದ್ದು, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಕೊಕ್ ನೀಡುವ ಸಾಧ್ಯತೆ ಹೆಚ್ಚಾಗಿದೆ.
ರಾಜ್ಯದ ಮೂರು ವಿಧಾನಸಭೆಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ 3-0ಯಿಂದ ಕ್ಲೀನ್ ಸ್ವೀಪ್ ಮಾಡುತ್ತಿದ್ದಂತೆ ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಹೈಕಮಾಂಡ್ ಒಲವು ತೋರಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಡಿಸಿಎಂ ಮತ್ತು ಸಿಎಂ ದೆಹಲಿ ಪ್ರವಾಸ ಕೈಗೊಂಡಿದ್ದಾರೆ.
ಸಚಿವ ಸಂಪುಟ ಪುನರಚನೆ ಮಾಡಬೇಕೋ ಅಥವಾ ವಿಸ್ತರಣೆ ಮಾಡಬೇಕೋ ಎಂಬ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ. ಆದರೆ ಶಿಕ್ಷಣ ಇಲಾಖೆ ಸಮರ್ಥವಾಗಿ ನಿಭಾಯಿಸಲು ವಿಫಲರಾಗಿರುವ ಮಧು ಬಂಗಾರಪ್ಪ ಅವರಿಗೆ ಸಂಪುಟದಿಂದ ಕೊಕ್ ದೊರೆಯುವ ಸಾಧ್ಯತೆ ಇದೆ.
ಮಧು ಬಂಗಾರಪ್ಪ ಅವರನ್ನು ಕೈಬಿಟ್ಟರೆ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಮತ್ತು ವಿಧಾನ ಪರಿಷತ್ ಸದಸ್ಯ ಹರಿಪ್ರಸಾದ್ ಇಬ್ಬರಲ್ಲಿ ಒಬ್ಬರಿಗೆ ಸ್ಥಾನ ದೊರೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಸರ್ಕಾರ ರಚನೆ ಆದಾಗ ಸಂಪುಟದಲ್ಲಿ ಸ್ಥಾನ ಸಿಗದೇ ಅತೃಪ್ತಿ ವ್ಯಕ್ತಪಡಿಸಿದ್ದ ಹಲವು ಹಿರಿಯ ಶಾಸಕರಿಗೂ ಈ ಬಾರಿ ಮಣೆ ಹಾಕುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಅದರಲ್ಲೂ ಶ್ಯಾಮನೂರು ಶಿವಶಂಕರಪ್ಪ ಅವರ ಪುತ್ರ ಮಲ್ಲಿಕಾರ್ಜುನ ಮುಂತಾದವರು ಇದ್ದಾರೆ.
ಮಧು ಬಂಗಾರಪ್ಪಗೆ ಕೊಕ್?
ಅತ್ಯಂತ ಮಹತ್ವದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸ್ಥಾನ ಮೊದಲ ಬಾರಿ ಪಡೆದರೂ ಸಮರ್ಥವಾಗಿ ನಿಭಾಯಿಸಲು ವಿಫಲರಾದ ಮಧು ಬಂಗಾರಪ್ಪ ಅವರಿಗೆ ಕೊಕ್ ನೀಡುವ ಸಾಧ್ಯತೆ ಇದೆ.
ಸಿಇಟಿ ಪರೀಕ್ಷೆ ಗೊಂದಲ, ಪಠ್ಯ ಪುಸ್ತಕ ಗೊಂದಲ ಸೇರಿದಂತೆ ಹಲವು ವಿಷಯಗಳಲ್ಲಿ ಎಡವಿದ್ದರಿಂದ ಸರ್ಕಾರ ಸಾಕಷ್ಟು ಮುಜುಗರಕ್ಕೆ ಒಳಗಾಗಿತ್ತು. ಅದರಲ್ಲೂ ಕನ್ನಡದ ಮೇಷ್ಟ್ರು ಎಂದೇ ಹೆಸರಾದ ಸಿಎಂ ಸಿದ್ದರಾಮಯ್ಯ ಕೂಡ ಶಾಲಾ ಶಿಕ್ಷಣ ಗೊಂದಲದಿಂದ ಮುಜುಗರ ಎದುರಿಸಬೇಕಾಗಿತ್ತು.
ಶಿಕ್ಷಣ ಸಚಿವರಿಗೆ ಕನ್ನಡ ಬರೋದಿಲ್ಲ ಎಂದ ವಿದ್ಯಾರ್ಥಿಯ ಮೇಲೆಯೇ ವೀಡಿಯೋ ಸಂವಾದದಲ್ಲಿ ಕ್ರಮಕ್ಕೆ ಸೂಚಿಸಿದ್ದು ನೆಟ್ಟಿಗರ ಕೆಂಗಣ್ಣಿಗೂ ಗುರಿಯಾಗುವಂತೆ ಮಾಡಿತ್ತು. ವಿದ್ಯಾರ್ಥಿಗಳ ಮೇಲೆ ಕ್ರಮ ಕೈಗೊಳ್ಳೋ ಇವರೊಬ್ಬರು ಶಿಕ್ಷಣ ಸಚಿವ ಅಂತ ಅನೇಕ ವೀಕ್ಷಕರು ಆಕ್ರೋಶವನ್ನು ಹೊರ ಹಾಕಿದ್ದರು. ಇದೊಂದು ದೊಡ್ಡ ಹೊಡೆತವನ್ನೇ ಮಧು ಬಂಗಾರಪ್ಪ ನೀಡಿ, ಸಂಪುಟದಿಂದ ಕೈಬಿಡೋ ವಿಚಾರದವರೆಗೆ ತಂದು ನಿಲ್ಲಿಸಿದೆ ಎಂದೇ ಹೇಳಲಾಗುತ್ತಿದೆ.
ಸಂಪುಟ ಸರ್ಜರಿಯ ದೊಡ್ಡ ಸುದ್ದಿಯ ಬೆನ್ನಲ್ಲೇ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಕೈಬಿಟ್ಟು, ಬೇರೆ ಯಾರಿಗಾದರೂ ಶಾಲಾ ಶಿಕ್ಷಣ ಸಚಿವರ ಖಾತೆ ಹಂಚಿಕೆ ಮಾಡಬೇಕು ಎಂಬ ಒತ್ತಡ ಸಿದ್ದು ಸಂಪುಟದ ಸಚಿವರಲ್ಲೇ ಎದ್ದಿದೆ ಎನ್ನಲಾಗುತ್ತಿದೆ.
ಇದೇ ಕಾರಣಕ್ಕೆ ಅವರನ್ನು ಕೈಬಿಟ್ಟು, ಅವರದ್ದೇ ಈಡಿಗ ಸಮುದಾಯದ ನಾಯಕರಾದಂತ ಬೇಳೂರು ಗೋಪಾಲಕೃಷ್ಣ ಅವರಿಗೆ ಸಚಿವ ಸ್ಥಾನ ನೀಡುವ ಚಿಂತನೆಯಲ್ಲಿ ಸಿಎಂ ಸಿದ್ಧರಾಮಯ್ಯ ಇದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ.