ಲೆಗ್‌ಸ್ಪಿನ್ನರ್ ಶ್ರೇಯಸ್ ಗೋಪಾಲ್ ಅವರ ಮಾರಕ ದಾಳಿಯನ್ನು (13ಕ್ಕೆ 5) ಎದುರಿಸಲಾಗದೆ ವಿಲವಿಲ ಒದ್ದಾಡಿದ ಸಿಕ್ಕಿಂ ತಂಡವು ಸಯ್ಯದ್ ಮುಷ್ತಾಖ್ ಅಲಿ ಟಿ20 ಟೂರ್ನಿಯಲ್ಲಿ ಕರ್ನಾಟಕಕ್ಕೆ ಸುಲಭ ತುತ್ತಾಗಿದೆ.
ಇಂಧೋರ್ ನ ಹೋಳ್ಕರ್ ಮೈದಾನದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸಿಕ್ಕಿಂ ಗೋಪಾಲ್ ಹಾಗೂ 3 ವಿಕೆಟ್ ಕಿತ್ತ ವಿದ್ಯಾಧರ್ ಪಾಟೀಲ್ ಅವರ ದಾಳಿ ಎದುರಿಸಲಾಗದೇ ಕೇವಲ 82 ರನ್‌ಗಳಿಗೆ ಮುದುಡಿಕೊಂಡಿತು.
ಈ ಅಲ್ಪ ಮೊತ್ತವನ್ನು ಬೆನ್ನತ್ತಿದ ಕರ್ನಾಟಕ ಕೇವಲ 2 ವಿಕೆಟ್ ನಷ್ಟಕ್ಕೆ 86 ರನ್ ಗಳಿಸುವ ಮೂಲಕ ಟೂರ್ನಿಯಲ್ಲಿ ತನ್ನ ಎರಡನೇ ಗೆಲುವು ಸಂಪಾದಿಸಿತು.
ತೀರಾ ಅನಿರೀಕ್ಷಿತ ಎಂಬಂತೆ ಕರ್ನಾಟಕದ ಸರದಿಯನ್ನು ಮನೀಶ್ ಪಾಂಡೆ ಆರಂಭಿಸಿದರು. ಮತ್ತೊಂದು ತುದಿಯಲ್ಲಿ ಮಾಯಂಕ್ ವಿಫಲರಾದರೆ ಮನಿಶ್ ಕೇವಲ 13 ಎಸೆತಗಳಲ್ಲಿ 30 ರನ್ ಗಳಿಸಿ ಅಜೇಯರಾಗಿ ಉಳಿದರು.
ಮಾಯಂಕ್ ನಿರ್ಗಮನದ ನಂತರ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಶ್ರೀಜಿತ ತಮ್ಮ ಪ್ರತಿಭೆಯ ಝಲಕ್ ತೋರಿದರು. ಕೇವಲ 13 ಎಸೆತಗಳಲ್ಲಿ ಅವರು ನಾಲ್ಕು ಬೌಂಡರಿ ಹಾಗೂ ಮೂರು ಸಿಕ್ಸರ್ ಒಳಗೊಂಡ 37 ರನ್ ಗಳಿಸಿದರು.
ಪಂದ್ಯಪುರುಷ ಶ್ರೇಯಸ್
ಇದಕ್ಕೆ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ಕಣಕ್ಕಿಳಿದ ಸಿಕ್ಕಿಂ ಕರ್ನಾಟಕದ ದಾಳಿಯ ಅನುಭವದ ಮುಂದೆ ರನ್ ಗಳಿಸಲು ತಡಕಾಡಿತು.
ತಮ್ಮ ಮೊದಲ ಓವರಿನ ಮೂರು ಮತ್ತು ಆರನೇ ಎಸೆತದಲ್ಲಿ ವಿದ್ಯಾಧರ್ ಪಾಟೀಲ್ ಎರಡು ವಿಕೆಟ್ ಕಬಳಿಸಿ ಸಿಕ್ಕಿಂ ಎದೆ ನಡುಗಿಸಿದರು. ಆಶಿಶ್ ಥಾಪಾ ಮತ್ತು ಪತ್ರೇಶ್ ಅವರು ಕೊಂಚ ಪ್ರತಿರೋಧ ತೋರಿದರೂ ಶ್ರೇಯಸ್ ಕೈಚಳಕಕ್ಕೆ ಬಲಿಯಾದರು.
53 ರನ್ ಆಗುವಲ್ಲಿ 5 ವಿಕೆಟ್ ಕಳೆದುಕೊಂಡ ಸಿಕ್ಕಿಂ ಅಲ್ಲಿಂದ ಯಾವುದೇ ಗಂಭಿರ ಹೋರಾಟ ನೀಡುವ ಕುರುಹು ತೋರಲಿಲ್ಲ. ಇದೇ ವೇಳೆ ಶ್ರೇಯಸ್ ತಮ್ಮ ಮಾರಕ ದಆಳಿಯಿಂದ ಯಾವುದೇ ಪವಾಡಕ್ಕೆ ಆಸ್ಪದ ಆಗದಂತೆ ನೋಡಿಕೊಂಡರು.
ಅದ್ಭುತ ದಾಳಿ ಸಂಘಟಿಸಿದ ಶ್ರೇಯಸ್ ಗೋಪಾಲ್ 4 ಓವರುಗಳಲ್ಲಿ ಕೇವಲ 13 ರನ್ ನೀಡಿ ಸಿಕ್ಕಿಂ ತಂಡದ ಐವರು ಬ್ಯಾಟರುಗಳಿಗೆ ಪೆವಿಲಿಯನ್ ದಾರಿ ತೋರಿದರು. ಇದಕ್ಕೆ ಅವರಿಗೆ ಪಂದ್ಯ ಪುರುಷ ಗೌರವ ಒಲಿಯಿತು.
ಇನ್ನು ವೇಗಿಗಳಾದ ವಿದ್ಯಾಧರ್ ಪಾಟೀಲ್ (10ಕ್ಕೆ 3) ಮತ್ತು ವೈಶಾಖ್ ವಿಜಯ್ ಕುಮಾರ್ (14ಕ್ಕೆ2) ಶ್ರೇಯಸ್ ಹಾಕಿದ ಒತ್ತಡವನ್ನು ಇಮ್ಮಡಿಗೊಳಿಸುವ ಮೂಲಕ ಸಿಕ್ಕಿಂ ಅನ್ನು ತೀರಾ ಟಲ್ಪ ಮೊತ್ತಕ್ಕೆ ಕಟ್ಟಿಹಾಕಲು ಸಹಕರಿಸಿದರು.