ದೇಶದ ಸಮಗ್ರತೆಯನ್ನು ಎತ್ತಿ ಹಿಡಿಯುವ ಉದ್ದೇಶದಿಂದ ವರ್ಷದಲ್ಲಿ ಎರಡು ಬಾರಿ ಸಂಸತ್ ಅಧಿವೇಶನವನ್ನು ದಕ್ಷಿಣ ಭಾರತದಲ್ಲಿ ನಡೆಯಬೇಕು ಎಂಬ ಆಂಧ್ರಪ್ರದೇಶ ಸಂಸದನ ಪ್ರಸ್ತಾಪಕ್ಕೆ ಮೈಸೂರು ಸಂಸದ ಯಧುವೀರ್ ಒಡೆಯರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಆಂಧ್ರಪ್ರದೇಶದ ವೈಎಸ್ ಆರ್ ಸಂಸದ ಮಡ್ಡೀಲಾ ಗುರುಮೂರ್ತಿ ಕೇಂದ್ರ ಸಂಸದೀಯ ಸಚಿವಾಲಯಕ್ಕೆ ಬರೆದ ಪತ್ರವನ್ನು ಪ್ರದರ್ಶಿಸಿ ಮಾತನಾಡಿದ ಯಧುವೀರ್ ಒಡೆಯರ್, ದಕ್ಷಿಣ ಭಾರತದಲ್ಲಿ ಎರಡು ಬಾರಿ ಸಂಸತ್ ಅಧಿವೇಶನ ನಡೆಸುವ ಪ್ರಸ್ತಾಪ ಇಟ್ಟಿರುವುದು ಬೇಸರದ ವಿಷಯ ಹಾಗೂ ಸಮಯ ವ್ಯರ್ಥ ಎಂದಿದ್ದಾರೆ.
ಪ್ರಜಾಪ್ರಭುತ್ವ ಆಡಳಿತದಲ್ಲಿ ನಮ್ಮ ಪಕ್ಷ ಎಲ್ಲಾ ಸಲಹೆಗಳನ್ನು ಸ್ವೀಕರಿಸುತ್ತದೆ. ಆದರೆ ಈ ಸಲಹೆ ಸಮಯ ವ್ಯರ್ಥ ಮಾಡುವಂತಹದ್ದಾಗಿದೆ. ಸಂಸತ್ ಕಲಾಪದ ಎಲ್ಲಾ ಆಡಳಿತ ಹಾಗೂ ಸಿಬ್ಬಂದಿ ಸೇರಿದಂತೆ ಪ್ರತಿಯೊಂದನ್ನು ಸ್ಥಳಾಂತರಿಸುವುದು ಸಮಯ ವ್ಯರ್ಥ ಮಾಡಿದಂತೆ ಎಂದು ಅವರು ಹೇಳಿದರು.
ದೇಶವನ್ನು ಕಟ್ಟುವುದು ಅತ್ಯಂತ ದೊಡ್ಡ ಹಾಗೂ ಮಹತ್ವದ ಜವಾಬ್ದಾರಿ. ಆದರೆ ಈ ರೀತಿಯ ಕ್ಷುಲಕ ವಿಷಯಗಳಿಗೆ ಪ್ರಚೋದನೆ ನೀಡುವುದು ಸರಿಯಲ್ಲ. ರಾಜಧಾನಿ ಹೊರಗೆ ಸಂಸತ್ ಅಧಿವೇಶನ ನಡೆಸುವ ಬಗ್ಗೆ ಈ ಹಿಂದೆಯೇ ಡಾ.ಬಿಆರ್. ಅಂಬೇಡ್ಕರ್ ಮತ್ತು ಅಟಲ್ ಬಿಹಾರಿ ವಾಜಪೇಯಿ ಅಂತಹ ಗಣ್ಯರೇ ಪ್ರಸ್ತಾಪಿಸಿದ್ದಾರೆ. ಆದರೆ ಅವರು ದೇಶವನ್ನು ಮೊದಲು ಸಮಗ್ರವಾಗಿ ಅರಿತುಕೊಂಡ ನಂತರ ಈ ಕೆಲಸಕ್ಕೆ ಕೈ ಹಾಕಬೇಕು ಎಂದಿದ್ದಾರೆ ಎಂದು ಯಧುವೀರ್ ವಿವರಿಸಿದರು.
ರಾಜಧಾನಿ ದೆಹಲಿಯಲ್ಲಿ ವಿಪರೀತವಾಗಿ ಹವಾಮಾನ ಬದಲಾವಣೆ ನಾವು ಅನುಭವಿಸುತ್ತೇವೆ. ಆದರೆ ಸಂಸತ್ ಭವನದ ಒಳಗೆ ಪ್ರವೇಶಿಸುತ್ತಿದ್ದಂತೆ ಹೊರಗಿನ ವಾತಾವರಣ ತಟ್ಟುವುದಿಲ್ಲ. ಸಮಗ್ರವಾಗಿ ಅಭಿವೃದ್ಧಿಪಡಿಸಿರುವ ಸಂಸತ್ ಭವನದಲ್ಲಿ ಅಧಿವೇಶನ ನಡೆಸುವುದು ಸೂಕ್ತ ಎಂದು ಅವರು ಅಭಿಪ್ರಾಯಪಟ್ಟರು.
ಚಳಿಗಾಲದ ಅಧಿವೇಶನ ದೆಹಲಿಯಲ್ಲಿ ನಡೆಸುವುದು ಸೂಕ್ತವಲ್ಲ. ಇಲ್ಲಿನ ಹವಾಮಾನದಿಂದ ಸಾಮಾನ್ಯ ಜನಜೀವನಕ್ಕೆ ತೊಂದರೆ ಆಗುತ್ತಿದೆ. ಇಂತಹ ಸಂದರ್ಭದಲ್ಲಿ ಅಧಿವೇಶನ ನಡೆಸುವುದು ಸರಿಯಲ್ಲ. ಅದರ ಬದಲು ಉತ್ತಮ ವಾತಾವರಣ ಇರುವ ದಕ್ಷಿಣ ಭಾರತದ ರಾಜ್ಯಗಳಲ್ಲಿ ವರ್ಷದಲ್ಲಿ ಎರಡು ಬಾರಿ ಅಧಿವೇಶನ ನಡೆಸುವುದು ಸೂಕ್ತ ಎಂದು ಆಂಧ್ರ ಸಂಸದ ಸಚಿವ ಕಿರಣ್ ರಿಜಿಜು ಅವರಿಗೆ ಪತ್ರ ಬರೆದಿದ್ದಾರೆ.