ಖಾಸಗಿ ಕಾಲೇಜುಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಸರ್ಕಾರಿ ಕೋಟಾದ ಇಂಜಿನಿಯರಿಂಗ್ ಸೀಟುಗಳನ್ನು ಬ್ಲಾಕ್ ಮಾಡಿ ಅರ್ಹ ವಿದ್ಯಾರ್ಥಿಗಳನ್ನು ವಂಚಿಸುತ್ತಿದ್ದ ಜಾಲವನ್ನು ಭೇದಿಸಿರುವ ಬೆಂಗಳೂರು ಪೊಲೀಸರು 10 ಮಂದಿಯನ್ನು ಬಂಧಿಸಿದ್ದಾರೆ.
ಖಾಸಗಿ ಕಾಲೇಜುಗಳಲ್ಲಿ ಮೀಸಲಿಟ್ಟಿರುವ ಸರ್ಕಾರಿ ಕೋಟಾದ 52 ಅರ್ಹ ವಿದ್ಯಾರ್ಥಿಗಳ ಸೀಟುಗಳನ್ನು ಅಪರಿಚಿತ ವ್ಯಕ್ತಿಗಳಿಗೆ ಪಾಸ್ ವರ್ಡ್, ಕೀ ಸೀಕ್ರೆಟ್ ಗಳನ್ನು ನೀಡಿ ಬ್ಲಾಕ್ ಮಾಡಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ವಂಚಿಸುತ್ತಾ ಬಂದಿದ್ದ ಗ್ಯಾಂಗ್ ಬಂಧಿಸಲಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬೆಂಗಳೂರಿನ ಮಲ್ಲೇಶ್ವರ ಪೊಲೀಸ್ ಠಾಣೆಗೆ ನೀಡಿದ್ದ ದೂರು ಆಧರಿಸಿ ಕ್ರಮ ಕೈಗೊಳ್ಳಲಾಗಿದ್ದು, ೧೩ ಮೊಬೈಲ್, ಲ್ಯಾಪ್ ಟಾಪ್ ವಶಕ್ಕೆ ಪಡಿಸಿಕೊಳ್ಳಲಾಗಿದ್ದು, ಬಂಧಿತರಲ್ಲಿ ಮೂವರು ಏಜೆಂಟ್ ಗಳಾಗಿದ್ದಾರೆ.
ಅಪರಿಚಿತರ ಮುಕ್ತ ಪ್ರವೇಶ ಅವಕಾಶ ಬಳಸಿಕೊಂಡು ಬಿಎಂಎಸ್ ಇಂಜಿನಿಯರಿಂಗ್ ಕಾಲೇಜು, ಆಕಾಶ್ ಇನ್ಸಿಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಮತ್ತು ನ್ಯೂ ಹಾರಿಜನ್ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ನಿಗದಿಯಾಗಿದ್ದ ಸರ್ಕಾರಿ ಕೋಟದ ಸೀಟುಗಳು ಅರ್ಹ ವಿದ್ಯಾರ್ಥಿಗಳಿಗೆ ತಪ್ಪಿಸಿ ದೊಡ್ಡ ಮೊತ್ತಕ್ಕೆ ಅನ್ಯ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿತ್ತು.
ಯಶವಂತಪುರದ ಕೆಇಎ ನೌಕರ ಅವಿನಾಶ್ (36), ಜೆಪಿನಗರದ ಮೂರನೇ ಹಂತದ ಹರ್ಷ (42), ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಪ್ರಕಾಶ್ (42), ಪುನೀತ್ (27), ಶಶಿಕುಮಾರ್ (34), ಪುರುಷೋತ್ತಮ್ (24), ಶೇಷಾದ್ರಿಪುರಂನ ತಿಲಕ್ (60), ಕನಕಪುರ ತಾಲೂಕಿನ ಸಾತನೂರಿನ ರವಿಶಂಕರ್, ಎಸ್.ಸಿ (56) ಹಾಗೂ ಬಿಟಿಎಂ ಲೇಔಟ್‌ನ ನೌಶದ್ ಅಲಂ (42) ಬಂಧಿತ ಆರೋಪಿಗಳಾಗಿದ್ದಾರೆ.
ನಗರ ಪೊಲೀಸ್ ಆಯುಕ್ತ ದಯಾನಂದ ಪತ್ರಿಕಾಗೋಷ್ಠಿಯಲ್ಲಿ ಪ್ರಕರಣವನ್ನು ವಿವರಿಸಿದರು
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ(ಕೆಇಎ) ಆಡಳಿತಾಧಿಕಾರಿ ಇಸಾಲುದ್ದೀನ್ ಜೆ ಗಾಡಿಯಲ್ ಕಳೆದ ನವೆಂಬರ್ 13ರಂದು ಮಲ್ಲೇಶ್ವರ ಪೊಲೀಸರಿಗೆ ನೀಡಿದ ದೂರಿನಲ್ಲಿ 52 ಇಂಜಿನಿಯರಿಂಗ್ ಅಭ್ಯರ್ಥಿಗಳ ಲಾಗಿನ್, ಮತ್ತು ಪಾಸ್‌ವರ್ಡ್ ಹಾಗೂ ಸಿಕ್ರೇಟ್ ಕೀ ಅನ್ನು ಅಪರಿಚಿತರು ಅನಧಿಕೃತವಾಗಿ ಪಡೆದುಕೊಂಡು, ಅಭ್ಯರ್ಥಿಗಳ ಪರವಾಗಿ ಆ್ಶನ್ ಎಂಟ್ರಿ ಮಾಡಿಸಿ, ಬಿಎಂಎಸ್ ಇಂಜಿನಿಯರಿಂಗ್ ಕಾಲೇಜು, ಅಕಾಶ್ ಇಸ್ಪೀಟ್ಯೂಟ್ ಆ್ ಇಂಜಿನಿಯರಿಂಗ್, ನ್ಯೂ ಹಾರೀಜನ್ ಇಂಜಿನಿಯರಿಂಗ್ ಕಾಲೇಜುಗಳಿಗೆ ಸರ್ಕಾರದ ಕೋಟದಡಿ ಬರುವ ಇಂಜಿನಿಯರಿಂಗ್ ಸೀಟುಗಳನ್ನು ಬ್ಲಾಕ್ ಮಾಡಿ, ಖಾಸಗಿ ಕಾಲೇಜುಗಳಿಗೆ ಲಾಭ ಮಾಡಿಕೊಟ್ಟು, ಅರ್ಹ ಅಭ್ಯರ್ಥಿಗಳಿಗೆ ವಂಚಿತರಾಗುವಂತೆ ಹಾಗೂ ಪ್ರಾಧಿಕಾರಕ್ಕೆ ವಂಚನೆ ನಡೆಸಿದ್ದಾರೆ ಎಂದು ತಿಳಿಸಿದ್ದರು.
ಮಲ್ಲೇಶ್ವರ ಪೊಲೀಸ್ ಇನ್ಸ್ ಪೆಕ್ಟರ್ ಬಿ.ಆರ್.ಜಗದೀಶ್ ಮತ್ತವರ ಸಿಬ್ಬಂದಿ ತನಿಖೆಯನ್ನು ಕೈಗೊಂಡು ದೂರಿನಲ್ಲಿ ತಿಳಿಸಿದ 52 ಇಂಜಿನಿಯರಿಂಗ್ ಅಭ್ಯರ್ಥಿಗಳ ಓಪನ್ ಎಂಟ್ರಿ ಮಾಡಿದ ಆರೋಪಿಗಳನ್ನು ಪತ್ತೆಗೆ ಮುಂದಾದಾಗ ಮೊಬೈಲ್, ಲ್ಯಾಪ್‌ಟಾಪ್‌ಗಳನ್ನು ಬಳಸಿಕೊಂಡು, ಬೇರೆ ಬೇರೆ ಸ್ಥಳಗಳಾದ ಗೋವಾ, ಶಿವಮೊಗ್ಗ, ದಾವಣಗೆರೆ, ಕಡೂರು ಹಾಗೂ ಬೆಂಗಳೂರನಲ್ಲಿ ಖಾಸಗಿ ಕಾಲೇಜುಗಳಿಗೆ ಲಾ‘ ಮಾಡಿ ಕೊಡುವ ಉದ್ದೇಶದಿಂದ ಅಭ್ಯರ್ಥಿಗಳೆಂದು ಬಿಂಬಿಸಿ ಕೆಇಎ ವೆಬ್‌ಸೈಟ್‌ನಲ್ಲಿ ಕಾಲೇಜು ಮತ್ತು ಕೋರ್ಸ್ ಆಯ್ಕೆ ಮಾಡಿರುವುದು ಪತ್ತೆಯಾಗಿತ್ತು.
ತಕ್ಷಣವೇ ಕಾರ್ಯಾಚರಣೆ ಕೈಗೊಂಡು ಕಳೆದ ನ.28 ರಂದು ನಾಲ್ವರನ್ನು ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಬಂಧಿಸಿ ವಿಚಾರಣೆ ನಡೆಸಿದಾಗ ವಂಚನೆ ಮಾಡಿರುವುದನ್ನು ಒಪ್ಪಿಕೊಂಡು ಪ್ರಕರಣದಲ್ಲಿ ಭಾಗಿಯಾಗಿರುವ ಮತ್ತಿಬ್ಬರ ವ್ಯಕ್ತಿಗಳ ಬಗ್ಗೆ ಮಾಹಿತಿಯನ್ನು ನೀಡಿದ್ದು, ಅದನ್ನು ಆರಿಸಿ ಅದೇ ದಿನ ಮತ್ತಿಬ್ಬರ ಸಹಚರರ ಪೈಕಿ ಓರ್ವನನ್ನು ದೇವನಹಳ್ಳಿ ಬಸ್ ನಿಲ್ದಾಣದ ಬಳಿ ವಶಕ್ಕೆ ಪಡೆಯಲಾಯಿತು.
ಬಂಧಿತ ಆರೋಪಿಯನ್ನು ವಿಚಾರಣೆ ನಡೆಸಿದಾಗ, ಆತನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಕರ್ತವ್ಯ ನಿರ್ವಹಿಸುವ ವ್ಯಕ್ತಿಯು ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಮಾಹಿತಿಯನ್ನು ನೀಡಿದ್ದು,ಅದರಂತೆ ನ.29 ರಂದು ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮುಂಭಾಗದಲ್ಲಿಯೇ, ಪ್ರಾಧಿಕಾರದಲ್ಲಿ ಕರ್ತವ್ಯ ನಿರ್ವಹಿಸುವ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಆತ ತಪ್ಪೊಪ್ಪಿಕೊಂಡಿರುತ್ತಾನೆ ಹಾಗೂ ಈ ಪ್ರಕರಣದಲ್ಲಿ ಸಿಇಟಿಯಲ್ಲಿ ಅರ್ಹ ಅಭ್ಯರ್ಥಿಗಳ ಮಾಹಿತಿಯನ್ನು ಇತರೆ ಅರೋಪಿಗಳೊಂದಿಗೆ ಹಂಚಿಕೊಂಡಿರುತ್ತಾನೆ. ಅದೇ ದಿನ ಈ ಪ್ರಕರಣದ ಮತ್ತೋರ್ವ ಆರೋಪಿಯನ್ನು ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ಬಂಧಿಸಲಾಗಿದೆ ಎಂದು ತಿಳಿಸಿದರು.
ಉತ್ತರ ವಿಭಾಗದ ಡಿಸಿಪಿ ಸೈದುಲು ಆಡಾವತ್, ಎಸಿಪಿಗಳಾದ ಹೆಚ್.ಕೃಷ್ಣಮೂರ್ತಿ ಹಾಗೂ ಪವನ್ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ಬಿ.ಆರ್.ಜಗದೀಶ್ ನೇತೃತ್ವದ ಸಿಬ್ಬಂದಿ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು.