23 ಕೋಟಿ ಕ್ಯಾಷ್, 1 ಕೆಜಿ ಚಿನ್ನದ ಬಿಸ್ಕತ್ತು, ಬೆಳ್ಳಿ ಪಿಸ್ತೂಲು, ಬೆಳ್ಳಿಯ ಕೈಕೊಳ.. ಇದು ಯಾವುದೋ ಅಧಿಕಾರಿ ಅಥವಾ ರಾಜಕಾರಣಿ ಮನೆಗೆ ಲೋಕಾಯುಕ್ತ, ಸಿಬಿಐ ದಾಳಿ ಮಾಡಿದಾಗ ಸಿಕ್ಕ ಸಂಪತ್ತು ಅಲ್ಲ. ಬದಲಿಗೆ ದೇವಸ್ಥಾನಕ್ಕೆ ಹರಿದು ಬಂದ ದಾನ!
ಹೌದು ರಾಜಸ್ಥಾನದ ಚಿತ್ತಘಡ್ ನಲ್ಲಿರುವ ಶ್ರೀ ಕೃಷ್ಣನ ಸನ್ವಾಲಿಯಾ ಸೇಥ್ ದೇವಸ್ಥಾನದ ಖಜಾನೆ ತೆರೆದು ಎಣಿಕೆ ಮಾಡಲಾಗಿದ್ದು, ಈ ವೇಳೆ ಭಕ್ತಾದಿಗಳು ದೇವಸ್ಥಾನಕ್ಕೆ ಮಾಡಿದ ದಾನ ನೋಡಿ ಅಧಿಕಾರಿಗಳು ಶಾಕ್ ಆಗಿದ್ದಾರೆ.
ಹುಂಡಿಯಲ್ಲಿ ಬಿದ್ದ ದಾನವನ್ನು ತೆರೆದು ಅಧಿಕಾರಿಗಳು ಎಣಿಕೆ ಮಾಡಿದಾಗ 23 ಕೋಟಿ ರೂ. ನಗದು, 1 ಕೆಜಿ ತೂಕದ ಚಿನ್ನದ ಬಿಸ್ಕತ್ತುಗಳು, ಭಾರೀ ಪ್ರಮಾಣದಲ್ಲಿ ಬೆಳ್ಳಿ ಸಾಮಾನುಗಳು ಪತ್ತೆಯಾಗಿವೆ. ಬೆಳ್ಳಿ ಸಾಮಾನುಗಳಲ್ಲಿ ಬೆಳ್ಳಿಯ ಪಿಸ್ತೂಲು, ಬೆಳ್ಳಿಯ ಬೇಡಿ, ಬೆಳ್ಳಿಯ ಬೀಗ-ಕೀಲಿ ಸೇರಿದಂತೆ ಹಲವು ಅಪರೂಪದ ವಸ್ತುಗಳು ಲಭಿಸಿವೆ.
ಈ ದೇವಸ್ಥಾನದಲ್ಲಿ ಇದೇ ಮೊದಲ ಬಾರಿ ಇಷ್ಟು ದೊಡ್ಡ ಮಟ್ಟದ ವಸ್ತು ಮತ್ತು ನಗದು ಪತ್ತೆಯಾಗಿದೆ. ಎರಡು ತಿಂಗಳ ಬಿಡುವಿನ ನಂತರ ಹುಂಡಿ ತೆರೆಯಲಾಗಿತ್ತು ಎಂದು ದೇವಸ್ಥಾನದ ಸಿಬ್ಬಂದಿ ತಿಳಿಸಿದ್ದಾರೆ.
ಮೊದಲ ಹಂತದ ಎಣಿಕೆ ವೇಳೆ 11.34 ಕೋಟಿ ರೂ., ಎರಡನೇ ಹಂತದಲ್ಲಿ 3.70 ಕೋಟಿ ರೂ. ಹಾಗೂ ಮೂರನೇ ಹಂತದಲ್ಲಿ 4.27 ಕೋಟಿ ರೂ. ನಗದು ಎಣಿಕೆ ಮಾಡಲಾಗಿದೆ. ಇದುವರೆಗೆ 19.22 ಕೋಟಿ ರೂ. ಎಣಿಸಲಾಗಿತ್ತು.
ಪ್ರತಿ ಅಮಾವಸ್ಯೆಯಂದು ದೇವಸ್ಥಾನಕ್ಕೆ ಬಂದ ದಾನವನ್ನು ಎಣಿಕೆ ಮಾಡಲಾಗುತ್ತಿದೆ. 7ರಿಂದ 8 ಸುತ್ತುಗಳಲ್ಲಿ ಎಣಿಕೆ ಮಾಡಲಾಗುವುದು. ಇನ್ನು ಚಿನ್ನ ಹಾಗೂ ಬೆಳ್ಳಿ ಸಾಮಾನುಗಳ ಲೆಕ್ಕ ನಡೆಯುತ್ತಿದ್ದು, ಇದರ ತೂಕ ಮಾಡಬೇಕಿದೆ.