ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆದ ನಂತರ ಸಿಎಂ ಸ್ಥಾನದ ಗೊಂದಲ ಮುಗಿದ ನಂತರ ಇದೀಗ ಮಹಾಯುತಿ ಸರ್ಕಾರದಲ್ಲಿ ಖಾತೆ ಹಂಚಿಕೆ ಬಿಕ್ಕಟ್ಟು ಮುಂದುವರಿದಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ಶಿವಸೇನೆಯ ಏಕನಾಥ್ ಶಿಂಧೆ ಪಟ್ಟು ಹಿಡಿದಿದ್ದರೆ, ಬಿಜೆಪಿ ಸಿಎಂ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಇದರಿಂದ ಅಸಮಾಧಾನದ ನಡುವೆಯೂ ಏಕನಾಥ್ ಶಿಂಧೆ ಮತ್ತು ಎನ್ ಸಿಪಿಯ ಅಜಿತ್ ಪವಾರ್ ಡಿಸಿಎಂ ಸ್ಥಾನಕ್ಕೆ ತೃಪ್ತಿಪಡುವಂತಾಗಿತ್ತು.
ಇದೀಗ ಸರ್ಕಾರ ರಚನೆಯಾಗಿ ತಿಂಗಳು ಆಗುತ್ತಾ ಬಂದರೂ ಸಚಿವ ಸಂಪುಟ ವಿಸ್ತರಣೆ ಆಗದೇ ಇರುವುದು ಖಾತೆ ವಿಷಯದಲ್ಲಿ ಒಮ್ಮತ ಮೂಡಿಲ್ಲ ಎಂಬುದು ದೃಢಪಟ್ಟಿದೆ. ಡಿಸೆಂಬರ್ 14ರಂದು ಸಚಿವ ಸಂಪುಟ ವಿಸ್ತರಣೆ ಆಗುವ ಸಾಧ್ಯತೆ ಇದ್ದು, ಸಿಎಂ ದೇವೇಂದ್ರ ಫಡ್ನವೀಸ್ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ ನಂತರ ವಿವರಗಳನ್ನು ಬಹಿರಂಗಪಡಿಸಲಿದ್ದಾರೆ ಎಂದು ಹೇಳಲಾಗಿದೆ.
ಮುಖ್ಯಮಂತ್ರಿ ಸ್ಥಾನ ಕೈತಪ್ಪಿದರೂ ಮೈತ್ರಿಪಕ್ಷಗಳಾದ ಶಿವಸೇನೆ ಮತ್ತು ಎನ್ ಸಿಪಿ ಪಕ್ಷಗಳು ಪ್ರಮುಖ ಖಾತೆಗಳಿಗೆ ಬಿಟ್ಟುಕೊಟ್ಟಿದೆ. ಅಲ್ಲದೇ ಹೆಚ್ಚು ಖಾತೆಗಳಿಗೂ ಬೇಡಿಕೆ ಇಟ್ಟಿರುವುದರಿಂದ ಬಿಜೆಪಿ ಒತ್ತಡದಲ್ಲಿ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಸಿಎಂ, ಡಿಸಿಎಂಗಳು ಹೊರತುಪಡಿಸಿದರೆ ಸರ್ಕಾರದಲ್ಲಿ ಯಾವುದೇ ಸಚಿವರು ಇಲ್ಲದೇ ಇರುವುದು ಆಡಳಿತ ಕುಸಿತಕ್ಕೆ ಕಾರಣವಾಗಿದೆ.
ಮೂಲಗಳ ಪ್ರಕಾರ ಬಿಜೆಪಿ 22, ಶಿವಸೇನಾ 12 ಮತ್ತು ಎನ್ ಸಿಪಿ 9-10 ಸ್ಥಾನ ಪಡೆಯುವ ಬಗ್ಗೆ ಮಾತುಕತೆ ಆಗಿತ್ತು. ಆದರೆ ಸಿಎಂ ಸ್ಥಾನ ಕೈತಪ್ಪಿದ್ದರಿಂದ ಪ್ರಮುಖ ಖಾತೆಗಳಿಗೆ ಮೈತ್ರಿ ಪಕ್ಷಗಳು ಬೇಡಿಕೆ ಮುಂದಿಟ್ಟಿವೆ. ಈ ಹಿನ್ನೆಲೆಯಲ್ಲ ಸರ್ಕಾರ ರಚನೆಯಾಗಿ ಒಂದು ವಾರ ಕಳೆದರೂ ಸಂಪುಟ ವಿಸ್ತರಣೆ ಆಗದೇ ಇರುವುದು ಮೈತ್ರಿಯಲ್ಲಿ ಯಾವುದೂ ಸರಿಯಿಲ್ಲ ಎಂಬುದನ್ನು ತೋರಿಸುತ್ತಿದೆ.