ದೇಶಾದ್ಯಂತ ಸಂಚಲನ ಮೂಡಿಸಿದ್ದ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಪತ್ನಿ ನಿಖಿತಾ ಸಿಂಘಾನಿಯಾ ಹಾಗೂ ಅವರ ಕುಟುಂಬದ ಸದಸ್ಯರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಹರಿಯಾಣದ ಗುರುಗ್ರಾಮದಲ್ಲಿ ಅತುಲ್ ಪತ್ನಿ ನಿಖಿತಾ ಸಿಂಘಾನಿಯಾ, ಅವರ ತಾಯಿ ನಿಶಾ ಸಿಂಘಾನಿಯಾ ಮತ್ತು ಬಾಮೈದ ಅನುರಾಗ್ ಸಿಂಘಾನಿಯಾ ಅವರನ್ನು ಬಂಧಿಸಲಾಗಿದೆ.
ಅತುಲ್ ಆತ್ಮಹತ್ಯೆ ಪ್ರಕರಣದಲ್ಲಿ ಬೆಂಗಳೂರು ಪೊಲೀಸರು ನೋಟಿಸ್ ಕಳುಹಿಸಿದರೂ ಉತ್ತರಿಸದೇ ತಲೆಮರೆಸಿಕೊಂಡಿದ್ದ ಕುಟುಂಬದ ಸದಸ್ಯರನ್ನು ಬಂಧಿಸಿ ಬೆಂಗಳೂರಿಗೆ ಕರೆತಂದಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಅತುಲ್ ವಿರುದ್ಧ ಪತ್ನಿ ಹಾಗೂ ಕುಟುಂಬಸ್ಥರು ವರದಕ್ಷಿಣೆ ಕಿರುಕುಳ ಸೇರಿದಂತೆ ಹಲವಾರು ಕೇಸುಗಳನ್ನು ದಾಖಲಿಸಿ ಮಾನಸಿಕವಾಗಿ ಹಿಂಸೆ ನೀಡಿದ್ದರಿಂದ ನೊಂದು ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೂ ಮುನ್ನ 24 ಪುಟಗಳ ಸುದೀರ್ಘ ಪತ್ರದಲ್ಲಿ ಸಂಪೂರ್ಣ ವಿವರ ದಾಖಲಿಸಿ ಸೂಕ್ತ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದ್ದರು.