ಫುಡ್ ಪ್ಯಾಕೆಟ್, ದಿನಸಿಯೊಳಗೆ ಡ್ರಗ್ಸ್ ತರಿಸಿಕೊಂಡು ಬೆಂಗಳೂರಿನಲ್ಲಿ ಮಾರುತ್ತಿದ್ದ ಅಂಗಡಿ ಮೇಲೆ ದಾಳಿ ಮಾಡಿದ ಸಿಸಿಬಿ ಪೊಲೀಸರು 24 ಕೋಟಿ ರೂ. ಮೌಲ್ಯದ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಕೆಆರ್ ಪುರಂನ ಟಿಜೆ ಹಳ್ಳಿಯ ಅಂಗಡಿ ಮೇಲೆ ದಾಳಿ ಮಾಡಿದ ಸಿಸಿಬಿ ಪೊಲೀಸರು ನೈಜಿರಿಯಾ ಮೂಲದ ರೋಜ್ಲೈಮ್ (40) ಎಂಬಾಕೆಯನ್ನು ಬಂಧಿಸಿದ್ದಾರೆ.
ರೋಜ್ಮೈಮ್ ನಡೆಸುತ್ತಿದ್ದ ಅಂಗಡಿಯಲ್ಲಿ ದಿನಸಿ ಪದಾರ್ಥಗಳ ಮಧ್ಯೆ ಅಡಗಿಸಿಡಲಾಗಿದ್ದ 12 ಕೆಜಿ ತೂಕದ ಬಿಳಿ ಮತ್ತು ಹಳದಿ ಬಣ್ಣದ ಎಂಡಿಎಂಎ ಕ್ರಿಸ್ಟಲ್ ಮತ್ತು 70 ಸಿಮ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ರೋಜ್ಲೈಮ್ ಡ್ರಗ್ಸ್ ನೈಜಿರಿಯಾ ಪ್ರಜೆಗಳಿಗೆ ಹಂಚುತ್ತಿದ್ದಾಗ ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ. ಈ ವೇಳೆ ಮುಂಬೈನಿಂದ ಫುಡ್ ಪ್ಯಾಕೆಟ್ ಮತ್ತು ದಿನಸಿ ಮೂಲಕ ಬೆಂಗಳೂರಿಗೆ ತರುತ್ತಿದ್ದ ಜೂಲಿಯೆಟ್ ಎಂಬ ಮಹಿಳೆ ಪರಾರಿಯಾಗಿದ್ದು, ಆಕೆಗೆ ಪೊಲೀಸರು ಬಲೆ ಬೀಸಿದ್ದಾರೆ.
೫ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ರೋಜ್ಲೈಮ್ ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಳು. ಕೆಆರ್ ಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.