ಗ್ಯಾಸ್ ಟ್ಯಾಂಕರ್ ಹಲವು ವಾಹನಗಳಿಗೆ ಡಿಕ್ಕಿ ಹೊಡೆದ ನಂತರ ಸ್ಫೋಟಗೊಂಡ ಪರಿಣಾಮ 8 ಮಂದಿ ಮೃತಪಟ್ಟ ಭೀಕರ ಘಟನೆ ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಸಂಭವಿಸಿದೆ.
ಶುಕ್ರವಾರ ಬೆಳಿಗ್ಗೆ ಎರಡು ಸಿಎನ್ ಜಿ ಗ್ಯಾಸ್ ಟ್ಯಾಂಕರ್ ಗಳು ಪರಸ್ಪರ ಡಿಕ್ಕಿ ಹೊಡೆದಿದೆ. ನಂತರ ದಟ್ಟ ಹೊಗೆ ಕಾಣಿಸಿಕೊಂಡ ಪರಿಣಾಮ ಹಲವು ವಾಹನಗಳು ಡಿಕ್ಕಿ ಹೊಡೆದಿದೆ. ಇದರಿಂದ ದೊಡ್ಡ ಸ್ಫೋಟವುಂಟಾಗಿ 8 ಮಂದಿ ಅಸುನೀಗಿದ್ದಾರೆ.
ಜೈಪುರ್-ಅಜ್ಮೀರ್ ಹೆದ್ದಾರಿಯಲ್ಲಿ ಮುಂಜಾನೆ ಸಂಭವಿಸಿದ ಅಪಘಾತದಲ್ಲಿ 300 ಮೀ.ಗೂ ಅಧಿಕ ದೂರದವರೆಗೆ ದಟ್ಟ ಹೊಗೆ ಕಾಣಿಸುತ್ತಿತ್ತು.
ಟ್ಯಾಂಕರ್ ಗಳ ನಡುವೆ ಡಿಕ್ಕಿ ಸಂಭವಿಸಿದಾಗ ಹಿಂದಿನಿಂದ ಬರುತ್ತಿದ್ದ ಪ್ರಯಾಣಿಕ ಬಸ್ ನಲ್ಲಿದ್ದ ಹಲವರಿಗೆ ಗಾಯಗಳಾಗಿದ್ದು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ದೌಡಾಯಿಸಿದ್ದು, ಬೆಂಕಿ ನಂದಿಸುವ ಕೆಲಸ ನಡೆಸಿದರೆ, ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.