ಕಲಬುರಗಿಯ ಸರ್ದಾರ್ ವಲ್ಲಭಾಯ್ ಪಟೇಲ್ ರಸ್ತೆಯ ಎಸ್.ಎಂ.ಪಂಡಿತ್ ರಂಗಮಂದಿರದ ಎದುರು ಬೃಹತ್ ಪ್ರದೇಶದಲ್ಲಿ ನಿರ್ಮಾಣವಾಗಿರುವ ಜಯದೇವ ಹೃದ್ರೋಗ ಸಂಸ್ಥೆಯ ಕಟ್ಟಡ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಆರೋಗ್ಯ ಸೇವೆ ನೀಡಲು ಸಜ್ಜಾಗಿದೆ.
ಕಲಬುರಗಿಯ ಹೊಸ ಆಸ್ಪತ್ರೆ ಸಂಕೀರ್ಣದ ಒಟ್ಟು ಯೋಜನಾ ವೆಚ್ಚ 262.20 ಕೋಟಿ ರೂ. ಆಗಿದ್ದು, ಇದರಿಂದ ಕಲ್ಯಾಣ ಕರ್ನಾಟ ಭಾಗದ ಕಲಬುರಗಿ, ಕೊಪ್ಪಳ, ಬೀದರ್, ಯಾದಗಿರಿ, ಬಳ್ಳಾರಿ, ರಾಯಚೂರು ಜಿಲ್ಲೆಯ ನಾಗರಿಕರಿಗೆ ಸಾಕಷ್ಟು ಅನುಕೂಲವಾಗಲಿದೆ.
ಅತ್ಯಾಧುನಿಕ ಹಾಗೂ ಗುಣಮಟ್ಟದ ಸೌಲಭ್ಯಗಳನ್ನು ಒಳಗೊಂಡಿರುವ 371 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಜಯದೇವ ಹೃದ್ರೋಗ ಸಂಸ್ಥೆಯ ದಕ್ಷಿಣ ಏಷ್ಯಾದ ಅತ್ಯಂತ ಬೃಹತ್ ಹೃದ್ರೋಗ ಚಿಕಿತ್ಸಾಸಂಸ್ಥೆ ಎಂಬ ಕೀರ್ತಿಗೂ ಪಾತ್ರವಾಗಿದೆ. ಜಯದೇವ ಸಂಸ್ಥೆ ಎಂದರೆ “ಚಿಕಿತ್ಸೆ ಮೊದಲು, ಹಣ ನಂತರ (ಟ್ರೀಟ್‌ಮೆಂಟ್ ಫಸ್ಟ್-ಪೇಮೆಂಟ್ ನೆಕ್ಸ್ಟ್) ಎಂಬ ಮುಖ್ಯ ಧ್ಯೇಯಹೊಂದಿದೆ.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹಲವಾರು ಆರೋಗ್ಯಕರ ಯೋಜನೆಗಳು ಜಿಲ್ಲೆಗೆ ಲಭಿಸಿವೆ. ಈ ಯೋಜನೆಗಳು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಆರೋಗ್ಯ ಮೂಲಸೌಕರ್ಯವನ್ನು ಹೆಚ್ಚಿಸುವ ಸರ್ಕಾರದ ಬದ್ಧತೆಗೆ ಸಾಕ್ಷಿಯಾಗಿವೆ.
ಕಲ್ಯಾಣ ಕರ್ನಾಟಕ ಭಾಗದ ಜನರ ಮನೆಬಾಗಿಲಿಗೆ ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸಬೇಕೆಂಬ ಸರ್ಕಾರದ ಹಾಗೂ ಸಚಿವ ಶರಣ್ ಪ್ರಕಾಶ್ ಪಾಟೀಲ್ ಆಶಯದಂತೆ ಈಗ ಕಲಬುರಗಿಯಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ಬೃಹತ್ ಕಟ್ಟಡ ಲೋಕಾರ್ಪಣೆ ಸಿದ್ಧವಾಗಿದೆ. ಈ ಭಾಗದಲ್ಲಿ ಅಭಿವೃದ್ಧಿಯ”ಕಲ್ಯಾಣ”ವಾಗಲಿ ಎಂಬ ಜನರು ಕನಸು ನನಸಾಗುತ್ತಿದೆ.