ಧರ್ಮಸ್ಥಳಕ್ಕೆ ಬಂದು ಆಣೆ ಮಾಡಲಿ: ಸಿಟಿ ರವಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಸವಾಲುನನ್ನನ್ನು ಅಸಭ್ಯವಾಗಿ ನಿಂದಿಸಿದ್ದು ನಿಜ. ಸಿಟಿ ರವಿ ಬೇಕಾದರೆ ಧರ್ಮಸ್ಥಳಕ್ಕೆ ಬಂದು ಆಣೆ ಮಾಡಿ ನಾನು ಹೇಳಿಲ್ಲ ಎಂದು ಹೇಳಲಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸವಾಲು ಹಾಕಿದ್ದಾರೆ.
ಖಾಸಗಿ ಟಿವಿ ಚಾನೆಲ್ ಗೆ ನೀಡಿದ ಸಂದರ್ಶನಲ್ಲಿ ವಿಧಾನಪರಿಷತ್ ನಲ್ಲಿ ನಡೆದ ಘಟನೆ ನನ್ನ ಮನಸ್ಸಿಗೆ ಘಾಸಿ ಉಂಟು ಮಾಡಿದೆ. ಸಿಟಿ ರವಿ ಅವರನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ ಎಂದು ಅವರು ಹೇಳಿದರು.
ನಾನು ಹಾಗೇ ಹೇಳಿಲ್ಲ ಎಂದು ವಾದ ಮಾಡುತ್ತಿರುವ ಸಿಟಿ ರವಿ ಧರ್ಮಸ್ಥಳಕ್ಕೆ ಬಂದು ಆಣೆ ಮಾಡಲಿ. ನಾನು ಕೂಡ ಕುಟುಂಬ ಸಮೇತರಾಗಿ ಬರುತ್ತೇನೆ ಎಂದು ಅವರು ಹೇಳಿದರು.
ನನಗೆ ಬಳಸಿದ ಪದದ ಬಗ್ಗೆ ಸಿಟಿ ರವಿ ಪತ್ನಿಗೆ ಯಾರಾದರೂ ಹೇಳಿದ್ದರೆ ಅವರು ಸುಮ್ಮನೆ ಇರುತ್ತಿದ್ದರಾ? ಸಂಸ್ಕಾರ, ಸಂಸ್ಕೃತಿ ಅವರೊಬ್ಬರಿಗಾ ಇರೋದು, ಚಿಕ್ಕಮಗಳೂರು ಜನರು ಇದನ್ನು ಹೇಗೆ ಸಮರ್ಥಿಸಿಕೊಳ್ಳುತ್ತಾರೆ ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ಹೆಣ್ಣು ಮಗಳನ್ನು ನಿಂದಿಸಿದ್ದನ್ನು ಕೂಡ ಬಿಜೆಪಿ ನಾಯಕರು ಸಮರ್ಥಿಸಿಕೊಳ್ಳುತ್ತಿರುವುದು ಅವರು ಹೆಣ್ಣು ಮಕ್ಕಳಿಗೆ ತೋರುವ ಸಂಸ್ಕೃತಿ ತೋರಿಸುತ್ತದೆ ಎಂದು ಅವರು ಹೇಳಿದರು.
ಮುಖ ಮುಚ್ಚಿಕೊಳ್ಳಲು ಗಾಯದ ನಾಟಕ ಆಡುತ್ತಿದ್ಧಾರೆ. ಅದಕ್ಕಾಗಿ ಗಾಯ ಮಾಡಿಕೊಂಡಿದ್ದಾರೆ. ಆದರೆ ಆ ಗಾಯ ಎಷ್ಟು ದೊಡ್ಡದು? ಎಷ್ಟು ಸ್ಟಿಚ್ ಹಾಕಿದ್ದಾರೆ. ಬ್ಯಾಂಡೇಜ್ ಕಟ್ಟಿಕೊಂಡು ನಾಟಕ ಮಾಡುತ್ತಿದ್ದಾರೆ ಎಂದು ಅವರು ಪ್ರಶ್ನಿಸಿದರು.