ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ ಶಿವರಾಜ್ ಕುಮಾರ್ ಕ್ಯಾನ್ಸರ್ ಪತ್ತೆಯಾಗಿದ್ದ ಮೂತ್ರಕೋಶವನ್ನು ತೆಗೆದುಹಾಕುವ ಮೂಲಕ ಯಶಸ್ವಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.
ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೊದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಶಿವರಾಜ್ ಕುಮಾರ್ ಅವರಿಗೆ ಮಂಗಳವಾರ ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 9 ಗಂಟೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಮುರುಗೇಶ್ ಮನೋಹರನ್ ನೇತೃತ್ವದ ವೈದ್ಯರ ತಂಡ ಸುಮಾರು 6 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಕ್ಯಾನ್ಸರ್ ಅಂಟಿಕೊಂಡಿದ್ದ ಮೂತ್ರಕೋಶವನ್ನು ತೆಗೆದುಹಾಕಲಾಗಿದ್ದು, ಕರುಳಿನ ಒಂದು ಭಾಗವನ್ನು ಕತ್ತರಿಸಿ ಕೃತಕ ಮೂತ್ರಕೋಶವಾಗಿ ಇಡಲಾಗಿದೆ.
ಚಿಕಿತ್ಸೆ ನಂತರ ವೈದ್ಯರು ಶಸ್ತ್ರಚಿಕಿತ್ಸೆ ವಿವರ ನೀಡಿದ್ದು, ಶಸ್ತ್ರಚಿಕಿತ್ಸೆ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಶಿವರಾಜ್ ಕುಮಾರ್ ಉತ್ತಮವಾಗಿ ಸ್ಪಂದಿಸುತ್ತಿದ್ದು, ಅವರ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.
ನಂತರ ಮಾತನಾಡಿದ ಪತ್ನಿ ಗೀತಾ ಶಿವರಾಜ್ ಕುಮಾರ್, ನಮ್ಮ ಪಾಲಿಗೆ ವೈದ್ಯರೇ ದೇವರು. ಅವರು ಶಿವಣ್ಣನಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಅಭಿಮಾನಿಗಳ ದೇವರುಗಳ ಹಾರೈಕೆ ಫಲ ನೀಡಿದೆ. ಸದ್ಯಕ್ಕೆ ಅವರು ಸುಸ್ತಾಗಿರುವುದರಿಂದ ವಿಶ್ರಾಂತಿಯಲ್ಲಿದ್ದು, ನಾಲ್ಕೈದು ದಿನಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೇ ಅಮೆರಿಕಕ್ಕೆ ತೆರಳಿದ್ದ ಶಿವರಾಜ್ ಕುಮಾರ್ ಕುಟುಂಬ 35 ದಿನಗಳ ಕಾಲ ಅಮೆರಿಕದಲ್ಲಿ ತಂಗಲಿದ್ದು , ನಂತರ ಸ್ವದೇಶಕ್ಕೆ ಮರಳಲಿದ್ದಾರೆ.