ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ 6 ನಕ್ಸಲರು ಒಂದೇ ಬಾರಿ ಶರಣಾಗಿದ್ದಾರೆ. ಈ ಮೂಲಕ ಶಸ್ತ್ರಾಸ್ತ್ರ ತ್ಯಜಿಸಿ ಸಮಾಜಮುಖಿಯಾಗಿದ್ದಾರೆ.
ಬೆಂಗಳೂರಿನ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಗೃಹ ಸಚಿವ ಜಿ.ಪರಮೇಶ್ವರ್, ಡಿಜಿಪಿ ಹಾಗೂ ಬೆಂಗಳೂರು ಪೊಲೀಸ್ ಆಯುಕ್ತರು ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ನಕ್ಸಲರು ಶಸ್ತ್ರಾಸ್ತ್ರ ತ್ಯಜಿಸಿ ಶರಣಾದರು.
ಮುಂಡಗಾರು ಲತಾ, ಸುಂದರಿ, ತಮಿಳುನಾಡಿನ ಕೆ.ವಸಂತ, ಕೇರಳದ ಜೀಶ, ಆಂಧ್ರಪ್ರದೇಶದ ಮಾರೆಪ್ಪ ಅರೋಲಿ ಶರಣಾದ ನಕ್ಸಲರು. ರಾಜ್ಯದ ನಕ್ಸಲ್ ಇತಿಹಾಸದಲ್ಲೇ 24 ವರ್ಷಗಳ ನಂತರ ಮೊದಲ ಬಾರಿ 6 ನಕ್ಸಲರು ಶರಣಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಮತ್ತೆ ತಲೆ ಎತ್ತಿದ್ದ ನಕ್ಸಲ್ ಚಟುವಟಿಕೆಗೆ ಕಡಿವಾಣ ಬಿದ್ದಂತಾಗಿದೆ.
ರಾಜ್ಯ ಸರ್ಕಾರ ನಕ್ಸಲರು ಶರಣಾಗಿ ಪ್ರಸ್ತಾಪ ಮುಂದಿಟ್ಟಿದ್ದರಿಂದ ಸಮಾಜಮುಖಿ ಆಗಲು ನಿರ್ಧರಿಸಿದ ನಕ್ಸಲರು ಷರತ್ತು ವಿಧಿಸಿದ್ದರು. ನಕ್ಸಲರ ಷರತ್ತಿಗೆ ಸರ್ಕಾರ ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಬುಧವಾರ ಶರಣಾಗಲು ಮುಂದಾಗಿದ್ದರು.
ನಕ್ಸಲರ ಶರಣಾಗತಿ ವಿಷಯ ರಾಜಕೀಯ ತಿರುವು ಪಡೆಯುತ್ತಿದ್ದಂತೆ ಚಿಕ್ಕಮಗಳೂರಿನಲ್ಲಿ ಶರಣಾಗುವ ನಿರ್ಧಾರ ಬದಲಿಸಿದ ನಕ್ಸಲರು ಬೆಂಗಳೂರಿನಲ್ಲಿ ಸಿಎಂ ಹಾಗೂ ಗೃಹ ಸಚಿವರ ಸಮ್ಮುಖದಲ್ಲಿ ಶರಣಾಗುವುದಾಗಿ ತಿಳಿಸಿದರು. ಇದಕ್ಕೆ ಸರ್ಕಾರ ಸಮ್ಮತಿ ಸೂಚಿಸಿತು.
ಚಿಕ್ಕಮಗಳೂರಿನ ಬಾಳೆಹೊನ್ನೂರಿನಿಂದ ಪೊಲೀಸರ ಬಿಗಿ ಭದ್ರತೆಯೊಂದಿಗೆ ಬೆಂಗಳೂರಿಗೆ ಆಗಮಿಸಿದ ೬ ನಕ್ಸಲರು ಶಸ್ತ್ರಾಸ್ತ್ರ ತ್ಯಜಿಸಿ ಶರಣಾಗುವ ಮೂಲಕ ಸಮಾಜಮುಖಿಗೆ ಮರಳಿದ್ದಾರೆ.