ನವದೆಹಲಿ: ತ್ವರಿತವಾಗಿ ಮತ್ತು ಕಾಲಕಾಲಕ್ಕೆ ಕ್ರೆಡಿಟ್ ಮಟ್ಟವನ್ನು ನವೀಕರಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಎಲ್ಲಾ ಕ್ರೆಡಿಟ್ ಬ್ಯೂರೋಗಳು ಮತ್ತು ಬ್ಯಾಂಕುಗಳಿಗೆ ಸೂಚನೆ ನೀಡಿದೆ.
ಕ್ರೆಡಿಟ್ ಸ್ಕೋರ್ ಬ್ಯೂರೋಗಳು, ಬ್ಯಾಂಕ್ ಗಳು ಮತ್ತು ಹಣಕಾಸು ಸಂಸ್ಥೆಗಳು ಕ್ರೆಡಿಟ್ ಸ್ಕೋರ್ ತ್ವರಿತವಾಗಿ ನವೀಕರಿಸಲು ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಲಾಗಿದೆ. ಈ ಹೊಸ ಮಾರ್ಗಸೂಚಿಗಳು ಜನವರಿ 1 ರಿಂದ ಜಾರಿಗೆ ಬಂದಿವೆ.
ಕ್ರೆಡಿಟ್ ಬ್ಯೂರೋಗಳು ಮೊದಲು ಕ್ರೆಡಿಟ್ ವರದಿಗಳನ್ನು ನವೀಕರಣ ಮಾಡಲು ಗರಿಷ್ಠ 30 ರಿಂದ 45 ದಿನಗಳನ್ನು ತೆಗೆದುಕೊಳ್ಳುತ್ತಿದ್ದವು. ಆದರೆ ಈಗ ಭಾರತೀಯ ರಿಸರ್ವ್ ಬ್ಯಾಂಕ್ ಆ ಗಡುವನ್ನು ಕಡಿಮೆ ಮಾಡಿದ್ದು, ಹೆಚ್ಚೆಂದರೆ 15 ದಿನಗಳಲ್ಲಿ ಕ್ರೆಡಿಟ್ ವರದಿ ನವೀಕರಣ ಮಾಡುವಂತೆ ಬ್ಯೂರೋಗಳಿಗೆ ಸೂಚಿಸಿದೆ.
ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಈ ವಿಷಯದ ಬಗ್ಗೆ ಗಮನ ಹರಿಸಬೇಕು. ಅವರು ತಮ್ಮ ಗ್ರಾಹಕರ ಬಗ್ಗೆ ಕ್ರೆಡಿಟ್ ಮಾಹಿತಿಯನ್ನು ಕಾಲಕಾಲಕ್ಕೆ ಕ್ರೆಡಿಟ್ ಬ್ಯೂರೋಗಳಿಗೆ ಕಳುಹಿಸಬೇಕು.
ಕ್ರೆಡಿಟ್ ಬ್ಯೂರೋಗಳು ತಮ್ಮ ಆಪ್ ಗಳು ಮತ್ತು ಪೋರ್ಟಲ್‌ಗಳಲ್ಲಿ ಗ್ರಾಹಕರು/ಸಾಲಗಾರರು/ಗ್ರಾಹಕರ ಕ್ರೆಡಿಟ್ ವರದಿಗಳನ್ನು ತಕ್ಷಣವೇ ನವೀಕರಿಸುತ್ತವೆ. ಅಲ್ಲದೇ, ಒಬ್ಬ ವ್ಯಕ್ತಿಗೆ ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ವೈಯಕ್ತಿಕ ಸಾಲ ಪಡೆಯಲು ಕಷ್ಟವಾಗುವಂತೆ ಆರ್ಬಿಐ ನಿಯಮಗಳನ್ನು ಬದಲಾವಣೆ ಮಾಡಿದೆ.
ಕ್ರೆಡಿಟ್ ವರದಿಯನ್ನು ತಡವಾಗಿ ನವೀಕರಿಸುವುದರಿಂದ ಉತ್ತಮ ಸಾಲೇತಿಹಾಸ ಇದ್ದವರೂ ಸಮಯಕ್ಕೆ ಸಾಲವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಋಣಾತ್ಮಕ ದಾಖಲೆ ಹೊಂದಿರುವವರು ತಕ್ಷಣವೇ ಸಾಲಗಳಿಗೆ ಅನುಮೋದನೆ ಪಡೆಯದಿರಬಹುದು.
ಅಂತಹ ಸಂದರ್ಭಗಳನ್ನು ತಪ್ಪಿಸಲು ನವೀಕರಿಸಿದ ಕ್ರೆಡಿಟ್ ವರದಿಯನ್ನು ಹೊಂದಿರುವುದು ಬಹಳ ಮುಖ್ಯ. ಸಾಲಕ್ಕಾಗಿ ಅರ್ಜಿ ಸಲ್ಲಿಸುವವರ ಹಿನ್ನೆಲೆಯನ್ನು ಅರ್ಥ ಮಾಡಿಕೊಳ್ಳಲು ಬ್ಯಾಂಕ್ಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಕ್ರೆಡಿಟ್ ವರದಿಯು ಮಾನದಂಡವಾಗಿ ನಿಂತಿದೆ.