ಮದುವೆಗೆ ನಾಲ್ಕು ದಿನ ಮುನ್ನ ಪೊಲೀಸರು ಹಾಗೂ ಪಂಚಾಯತ್ ಮುಖಂಡರ ಸಮ್ಮುಖದಲ್ಲೇ ಮಗಳನ್ನು ತಂದೆಯೊಬ್ಬ ಗುಂಡಿಕ್ಕಿ ಕೊಂದ ಆಘಾತಕಾರಿ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದೆ.
ಮನೆಯಲ್ಲಿ ನೋಡಿದ ಹುಡುಗನ ಜೊತೆ ಮದುವೆ ಆಗಲು ನಿರಾಕರಿಸಿದ 20 ವರ್ಷದ ಪುತ್ರಿ ತನು ಗುರ್ಜಾರ್ ಎಂಬಾಕೆಯನ್ನು ಆಕೆಯ ತಂದೆಯೇ ಎಲ್ಲರ ಸಮ್ಮುಖದಲ್ಲಿ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.
ನಗರದ ಗೋಲಾ ಕಾ ಮಂದಿರದಲ್ಲಿ ಮಂಗಳವಾರ ರಾತ್ರಿ 9 ಗಂಟೆ ಸುಮಾರಿಗೆ ಮಹೇಶ್ ಗುಜ್ಜಾರ್ ಸ್ವದೇಶೀ ನಿರ್ಮಿತ ಪಿಸ್ತೂಲಿನಿಂದ ಅತೀ ಸಮೀಪದಿಂದ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ. ಅಲ್ಲದೇ ಮಗಳು ಸತ್ತಿರುವುದನ್ನು ಖಚಿತಪಡಿಸಿಕೊಳ್ಳಲು ಮತ್ತೆ ಗುಂಡು ಹಾರಿಸಿ ವಿಕೃತಿ ಮೆರೆದಿದ್ದಾನೆ.
ಕೊಲೆಗೂ ಕೆಲವೇ ಗಂಟೆಗಳ ಮುನ್ನ ತನು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಪೋಸ್ಟ್ ಮಾಡಿ ಮನೆಯಲ್ಲಿ ನನಗೆ ಇಷ್ಟವಿಲ್ಲದವರ ಜೊತೆ ಮದುವೆಗೆ ಬಲವಂತ ಮಾಡುತ್ತಿದ್ದಾರೆ. ನಾನು ನನಗೆ ಇಷ್ಟ ಆದವರನ್ನು ಮದುವೆ ಆಗುತ್ತೇನೆ ಹೊರತು ಯಾರ ಬಲವಂತಕ್ಕೆ ಅಲ್ಲ ಎಂದು ತಂದೆ ಹಾಗೂ ಕುಟುಂಬದ ಕೆಲವರ ಹೆಸರು ಪ್ರಸ್ತಾಪಿಸಿದ್ದಳು.
ನಾನು ವಿಕ್ಕಿ ಎಂಬಾತನನ್ನು ಮದುವೆ ಆಗುತ್ತೇನೆ. ಆರಂಭದಲ್ಲಿ ಮನೆಯಲ್ಲಿ ಒಪ್ಪಿಗೆ ನೀಡಿದ್ದರು. ನಂತರ ನಿರಾಕರಿಸಿದರು. ಈ ಕಾರಣಕ್ಕಾಗಿ ದಿನ ನನಗೆ ಹೊಡೆಯುತ್ತಿದ್ದರು ಮತ್ತು ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು ಎಂದು ಹೇಳಿದ್ದಳು.
ತನು ಮತ್ತು ದೆಹಲಿಯ ಆಗ್ರಾದ ನಿವಾಸಿ ವಿಕ್ಕಿ 6 ವರ್ಷಗಳಿಂದ ಪ್ರೀತಿಸುತ್ತಿದ್ದು, ವೀಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸ್ ಅಧಿಕಾರಿ ಮನೆಗೆ ಹೋಗಿ ರಾಜೀ ಸಂಧಾನ ಮಾಡುತ್ತಿದ್ದರು. ಈ ವೇಳೆ ಗ್ರಾಮ ಪಂಚಾಯತಿ ಸದಸ್ಯರು ಕೂಡ ಇದ್ದರು. ಈ ವೇಳೆ ದಿಢೀರನೆ ಪಿಸ್ತೂಲು ತೆಗೆದು ತಂದೆ ಗುಂಡಿಕ್ಕಿ ತಂದೆ ಹತ್ಯೆ ಮಾಡಿದ್ದಾನೆ.