ಎಟಿಎಎಂ ವಾಹನದ ಮೇಲೆ ಗುಂಡು ಹಾರಿಸಿ ಸಿಬ್ಬಂದಿಯನ್ನು ಕೊಂದ ದುಷ್ಕರ್ಮಿಗಳು ಹಣ ದರೋಡೆ ಮಾಡಿದ ಆಘಾತಕಾರಿ ಘಟನೆ ಬೀದರ್ ನಲ್ಲಿ ನಡೆದಿದೆ.
ಗುರುವಾರ ಬೆಳಿಗ್ಗೆ ಶಿವಾಜಿ ರಾವ್ ವೃತ್ತದ ಬಳಿ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಎಟಿಎಂ ವಾಹನದ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ದಾಳಿಯಿಂದ ಸಿಬ್ಬಂದಿ ಗಿರಿ ವೆಂಕಟೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬೀದರ್ನ ಎಸ್‌ಬಿಐ ಬ್ಯಾಂಕ್ ಕಚೇರಿಯ ಎಟಿಎಂಗೆ ಹಣ ಹಾಕಲು ಏಜೆನ್ಸಿಯ ಸಿಬ್ಬಂದಿ ವಾಹನದಲ್ಲಿ ಬಂದಿದ್ದಾಗ ಇಬ್ಬರು ದುಷ್ಕರ್ಮಿಗಳು ಬಂದು ಗುಂಡು ಹಾರಿಸಿದ್ದಾರೆ. ಬಳಿಕ ಉಳಿದ ಸಿಬ್ಬಂದಿ ಮೇಲೆ ಕಣ್ಣಿಗೆ ಖಾರದ ಪುಡಿ ಎರಚಿ ಹಣವನ್ನು ಖದೀಮರು ಕದ್ದೊಯ್ದಿದ್ದಾರೆ.
ದುಷ್ಕರ್ಮಿಗಳು ೫ ಸುತ್ತಿನ ಗುಂಡಿನ ದಾಳಿ ನಡೆದ ಬಳಿಕ ಹಣ ತೆಗೆದುಕೊಂಡು ಖದೀಮರು ಪರಾರಿಯಾಗಿದ್ದಾರೆ. ಘಟನೆಯಲ್ಲಿ ಏಜೆನ್ಸಿಯ ಗಿರಿ ವೆಂಕಟೇಶ್ ಸ್ಥಳದಲ್ಲೇ ಮೃತಪಟ್ಟಿದ್ದರೆ, ಮತ್ತೊಬ್ಬ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಎಟಿಎಂಗೆ ಹಣ ಹಾಕುವ ಪಿಸಿಎಸ್ ಏಜೆನ್ಸಿಯ ಸಿಬ್ಬಂದಿ ಬ್ಯಾಂಕ್ ಎದುರುಗಡೆ ಬಂದು ತಮ್ಮ ವಾಹನ ನಿಲ್ಲಿಸಿ, ಎಟಿಎಂ ಹಣ ತುಂಬಲು ವಾಹನದ ಡೋರ್ ತೆಗೆಯುತ್ತಿದ್ದಂತೆ ಅವರ ಮೇಲೆ ಐದು ಸುತ್ತು ಗುಂಡಿನ ದಾಳಿಯಾಗಿದೆ.
ಸಿಬ್ಬಂದಿಯ ಕಣ್ಣಿಗೆ ಖಾರದ ಪುಡಿ ಎರಚಿದ್ದರಿಂದ ಯಾರೂ ರಕ್ಷಣೆ ಮಾಡಿಕೊಳ್ಳಲು ಆಗಿಲ್ಲ. ಇದೇ ವೇಳೆ ಸಾರ್ವಜನಿಕರು ಯಾರೂ ನೆರವಿಗೆ ಬಾರದೇ ಇರುವುದು ಅಚ್ಚರಿ ಮೂಡಿಸಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು ತನಿಖೆ ಆರಂಭಿಸಿದ್ದಾರೆ.