ಅಹಮದಾಬಾದ್: ವಿಜಯ್ ಹಜಾರೆ ಟ್ರೋಫಿಗಾಗಿ ನಡೆಯುತ್ತಿರುವ ಟೂರ್ನಿಯಲ್ಲಿ ಕರ್ನಾಟಕ ತಂಡದ ಅದ್ವಿತೀಯ ಸಾಧನೆ ಮುಂದುವರಿದಿದೆ.
ಈಗಾಗಲೇ ನಾಕೌಟ್ ಹಂತಕ್ಕೆ ಕಾಲಿಟ್ಟಿರುವ ಕರ್ನಾಟಕವು ಗುಂಪು ಹಂತದ ಲೀಗ್ ಪಂದ್ಯದಲ್ಲಿ ನಾಗಾಲ್ಯಾಂಡ್ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.
206 ರನ್ ಗಳ ಗುರಿ ಬೆನ್ನತ್ತಿದ ಕರ್ನಾಟಕ ತಂಡ ನಾಯಕ ಮಾಯಂಕ್ ಅಗರ್‌ವಾಲವರ ನಾಲ್ಕನೇ ಶತಕದ (ಅಜೇಯ 116) ನೆರವಿನಿಂದ ಕೇವಲ ಒಂದು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.
ಮಾಯಂಕ್ 119 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 9 ಬೌಂಡರಿಗಳ ಸಹಾಯದಿಂದ ಅಜೇಯ 116 ರನ್ ಗಳಿಸಿದರೆ, ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಅನೀಶ್ 10 ಬೌಂಡರಿಗಳ ಸಹಾಯದಿಂದ 82 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು.
ಈ ಇಬ್ಬರು ಬ್ಯಾಟ್ಸ್ ಮನ್‌ಗಳು ಎರಡನೇ ವಿಕೆಟ್‌ಗೆ ಅಜೇಯ 198 ರನ್‌ಗಳ ಜೊತೆಯಾಟ ನಿಭಾಯಿಸುವ ಮೂಲಕ ನಾಗಾಲ್ಯಾಂಡ್ ನೀಡಿದ್ದ 206 ರನ್ ಗುರಿಯನ್ನು ಕರ್ನಾಟಕವು 37.5 ಓವರ್‌ಗಳಲ್ಲಿ ತಲುಪಿತು. ಅದ್ಭುತ ಇನ್ನಿಂಗ್ಸ್ ಗಾಗಿ ಮಾಯಂಕ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ಪಡೆದರು.
ಮೊದಲು ಬ್ಯಾಟ್ ಮಾಡಿದ ನಾಗಾಲ್ಯಾಂಡ್ 48.3 ಓವರ್‌ಗಳಲ್ಲಿ 206 ರನ್ ಗಳಿಗೆ ಆಲೌಟ್ ಆಯಿತು. ಶ್ರೇಯಸ್ ಗೋಪಾಲ್ 4, ಅಭಿಲಾಷ್ ಶೆಟ್ಟಿ 2, ಕೌಶಿಕ್, ಹಾರ್ದಿಕ್ ರಾಜ್, ವಿದ್ಯಾಧರ್ ಪಾಟೀಲ್ ಮತ್ತು ನಿಕಿನ್ ಜೋಸ್ ತಲಾ 1 ವಿಕೆಟ್ ಪಡೆದರು.
ನಾಗಾಲ್ಯಾಂಡ್ ಇನ್ನಿಂಗ್ಸ್ ನಲ್ಲಿ ಚೇತನ್ ಬಿಶ್ತ್ (ಅಜೇಯ 77) ಮತ್ತು ನಾಯಕ ಜೊನಾಥನ್ (51) ಅರ್ಧಶತಕಗಳನ್ನು ಗಳಿಸಿದರು. ಈವರಿಬ್ಬರನ್ನು ಹೊರತುಪಡಿಸಿ, ಇತರ ಬ್ಯಾಟರುಗಳು ಯಾವುದೇ ಗಮನಾರ್ಹ ಕೊಡುಗೆ ನೀಡಲಿಲ್ಲ.
ಮಾಯಂಕ್ ನಾಗಾಲೋಟ
ಈ ಋತುವಿನಲ್ಲಿ ಮಯಾಂಕ್ ಅವರ ಬ್ಯಾಟಿಂಗ್ ಬೇರೆಯದೇ ಸ್ತರದಲ್ಲಿದೆ. 7 ಪಂದ್ಯಗಳಲ್ಲಿ 4 ಶತಕ ಮತ್ತು 1 ಅರ್ಧಶತಕ ಸೇರಿದಂತೆ ಒಟ್ಟು 613 ರನ್ ಗಳಿಸಿದ್ದಾರೆ.
ಈ ಋತುವಿನಲ್ಲಿ ಅವರ ಅತ್ಯುತ್ತಮ ಸ್ಕೋರ್ ಔಟಾಗದೆ 139 ಆಗಿತ್ತು. ಮಯಾಂಕ್ ಈ 7 ಪಂದ್ಯಗಳಲ್ಲಿ 47, 18, 139, 100, 124, 69 ಮತ್ತು ಅಜೇಯ 116 ರನ್ ಗಳಿಸಿದರು ಮತ್ತು ಈ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಆಗಿದ್ದಾರೆ.
ಇದು ಕರ್ನಾಟಕಕ್ಕೆ 7 ಪಂದ್ಯಗಳಲ್ಲಿ ಆರನೇ ಜಯವಾಗಿದ್ದು, ಇದೀಗ ಕರ್ನಾಟಕ ತಂಡ 24 ಅಂಕಗಳೊಂದಿಗೆ ಸಿ ಗುಂಪಿನ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ತಲುಪಿದೆ.
ಪಂಜಾಬ್ ವಿರುದ್ಧ ಮಯಾಂಕ್ ಅಜೇಯ 139 ರನ್ ಬಾರಿಸಿದ್ದರು. ನಂತರ ಅವರು ಅರುಣಾಚಲ ಪ್ರದೇಶದ ವಿರುದ್ಧ ಅಜೇಯ 100 ರನ್ ಗಳಿಸಿದರು.
ಬಳಿಕ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಮಯಾಂಕ್ 124 ರನ್ ಗಳಿಸಿ ಹ್ಯಾಟ್ರಿಕ್ ಶತಕ ಬಾರಿಸಿದ್ದರು. ನಂತರ ಮಯಾಂಕ್ ಸೌರಾಷ್ಟ್ರ ವಿರುದ್ಧ ಅರ್ಧಶತಕ (69) ಗಳಿಸಿದರು.