ಮನೆಗೆ ನುಗ್ಗಿದ ದುಷ್ಕರ್ಮಿ 6 ಬಾರಿ ಚಾಕು ಇರಿದಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದ ಬಾಲಿವುಟ್ ನಟ ಸೈಫ್ ಅಲಿ ಖಾನ್ ಅವರನ್ನು ಆಟೋದಲ್ಲಿ ಆಸ್ಪತ್ರೆಗೆ ಸಾಗಿಸಿದ್ದರು ಎಂಬ ಅಂಶ ತಡವಾಗಿ ಬೆಳಕಿಗೆ ಬಂದಿದೆ.
54 ವರ್ಷದ ಸೈಫ್ ಅಲಿ ಖಾನ್ ಅವರ ಮನೆ ದರೋಡೆ ಮಾಡುವ ಉದ್ದೇಶದಿಂದ ಬಂದ ವ್ಯಕ್ತಿ ಸೈಫ್ ಅಲಿ ಖಾನ್ ಅವರನ್ನು ನೋಡಿ ಅವರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
6 ಬಾರಿ ಚಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದ ಸೈಫ್ ಅಲಿ ಖಾನ್ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದರು. ಈ ವೇಳೆ 23 ವರ್ಷದ ಪುತ್ರ ಇಬ್ರಾಹಿಂ ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
ಕಾರನ್ನು ಕೂಡಲೇ ಹೊರತೆಗೆಯಲು ಇಬ್ರಾಹಿಂ ಆಗಿಲ್ಲ. ಕಾರು ರಿಪೇರಿಯಲ್ಲಿದೆಯೋ ಅಥವಾ ಸ್ಟಾರ್ಟ್ ಆಗುತ್ತಿಲ್ಲವೋ ಎಂಬ ಗೊಂದಲದ ಹಿನ್ನೆಲೆಯಲ್ಲಿ ಕೂಡಲೇ ಆಟೋ ಬುಕ್ ಮಾಡಿ ಆಟೋದಲ್ಲಿ ಸೈಫ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.
ಮನೆಯಿಂದ 2 ಕಿ.ಮೀ. ದೂರದಲ್ಲಿ ಲೀಲಾವತಿ ಆಸ್ಪತ್ರೆ ಇದ್ದು, ಆಟೋದಲ್ಲಿ ಅವರನ್ನು ಆಸ್ಪತ್ರೆಗೆ ಸಾಗಿಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆಟೋ ಬಳಿ ಪತ್ನಿ ಕರೀನಾ ಕಪೂರ್ ಮತ್ತು ಇಬ್ರಾಹಿಂ ಮನೆಯ ಸಿಬ್ಬಂದಿ ಹತ್ತಿರ ಮಾತನಾಡಿ ಹೊರಡುತ್ತಿರುವುದು ದಾಖಲಾಗಿದೆ.