ಕಾಂಗ್ರೆಸ್ ಪಕ್ಷ ನೀಡಿರುವ ಕೆಲಸವನ್ನು ಬಾಯಿ ಮುಚ್ಚಿಕೊಂಡು ಮಾಡಿ. ಯಾವಾಗ ಏನು ಮಾಡಬೇಕು ಎಂಬುದು ಹೈಕಮಾಂಡ್ ಗೆ ಗೊತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಾಕೀತು ಮಾಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಕುರಿತು ಕಾಂಗ್ರೆಸ್ ನಾಯಕರು ದಿನಕ್ಕೊಂದು ಹೇಳಿಕೆ ನೀಡುತ್ತಿರುವ ಬಗ್ಗೆ ಬೆಂಗಳೂರಿನಲ್ಲಿ ಶುಕ್ರವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಮಾಧ್ಯಮಗಳಲ್ಲಿ ಹೇಳಿಕೆ ನೀಡಿ ವಿವಾದ ಸೃಷ್ಟಿಸುವುದರಿಂದ ಏನೂ ಆಗಲ್ಲ ಎಂದರು.
ಕೆಲವರು ನಾವು ಹೇಳಿದಂತೆ ಹೈಕಮಾಂಡ್ ಕೇಳುತ್ತದೆ ಎಂದು ಭಾವಿಸಿದ್ದಾರೆ. ಹೈಕಮಾಂಡ್ ಯಾವಾಗ ಏನು ನಿರ್ಧಾರ ತೆಗೆದುಕೊಳ್ಳಬೇಕೋ ಆಗ ತೆಗೆದುಕೊಳ್ಳುತ್ತದೆ. ಹೈಕಮಾಂಡ್ ಗೆ ಏನು ಮಾಡಬೇಕು ಎಂಬುದು ಗೊತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.
ಎಲ್ಲರೂ ಬಾಯಿ ಮುಚ್ಚಿಕೊಂಡು ಇರಬೇಕು. ನಿಮಗೆ ಕೊಟ್ಟ ಕೆಲಸ ನೀವು ಮಾಡಿ. ಸುಮ್ನೆ ಮಾತನಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ನಿಮ್ಮ ಹೇಳಿಕೆಗಳಿಂದ ಪಕ್ಷಕ್ಕೆ ಮುಜುಗರ ಆಗಬಾರದು ಎಂದು ಖರ್ಗೆ ಹೇಳಿದರು.
ಪಕ್ಷದ ಕುರಿತು ತೀರ್ಮಾನ ಕೈಗೊಳ್ಳಲು ನಾವು ಇದ್ದೇವೆ. ಏನೇ ಇದ್ದರೂ ನಾವು ಸೂಕ್ತ ಸಮಯದಲ್ಲಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಅವರು ಸ್ಪಷ್ಟಪಡಿಸಿದರು.