ಬಸ್ ಗಾಗಿ ಕಾಯುತ್ತಿದ್ದ ಮಹಿಳೆ ಮೇಲೆ ಕೂಲಿ ಕಾರ್ಮಿಕರು ಸಾಮೂಹಿಕ ಅತ್ಯಾಚಾರ ಎಸಗಿದ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಈ ಸಂಬಂಧ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಕಳೆದ ಭಾನುವಾರ ಮಧ್ಯರಾತ್ರಿ 11.30ರ ವೇಳೆಗೆ ತಮಿಳುನಾಡಿನಿಂದ ಕೆಆರ್ ಮಾರುಕಟ್ಟೆಗೆ ಬಂದಿಳಿದ ಮಹಿಳೆ, ಯಲಹಂಕಕ್ಕೆ ತೆರಳಲು ಬಸ್ ಗಾಗಿ ಕಾಯುತ್ತಿದ್ದಾಗ ಈ ಘಟನೆ ನಡೆದಿದೆ.
ಕೆಆರ್ ಮಾರುಕಟ್ಟೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಗಣೇಶ್ ಹಾಗೂ ಶರವಣ ಅವರನ್ನು ಬಂಧಿಸಲಾಗಿದ್ದು, ಇತರರಿಗಾಗಿ ಶೋಧ ಕಾರ್ಯ ನಡೆದಿದೆ.
ಕೆಆರ್ ಮಾರುಕಟ್ಟೆಯಲ್ಲಿ ಇಳಿದ ಮಹಿಳೆ ಯಲಹಂಕ ಕಡೆಗೆ ತೆರಳಲು ಬಸ್ ಗಾಗಿ ಕಾಯುತ್ತಿದ್ದರು. ಬಸ್ ಬಾರದೇ ಇದ್ದಾಗ ಅಲ್ಲಿಯೇ ಇದ್ದ ಕೂಲಿಗಳನ್ನು ಬಸ್ ಎಲ್ಲಿ ಬರುತ್ತೆ ಎಂದು ಪ್ರಶ್ನಿಸಿದ್ದಾರೆ.
ಬಸ್ ಬರುವ ಜಾಗ ತೋರಿಸತ್ತೇವೆ ಎಂದು ನಿಲ್ದಾಣದ ಸಮೀಪದಲ್ಲೇ ಇರುವ ಗೋಡೌನ್ ಸ್ಟ್ರೀಟ್‌ಗೆ ಕರೆದೊಯ್ದ ಕೂಲಿಗಳು ಅತ್ಯಾಚಾರ ಎಸಗಿ ಆಕೆಯ ಮೈಮೇಲಿದ್ದ ಚಿನ್ನಾಭರಣಗಳನ್ನು ದೋಚಿ ಪರಾರಿ ಆಗಿದ್ದರು.
ಸಂತ್ರಸ್ತ ಮಹಿಳೆ ಬೆಂಗಳೂರಿನ ಕೇಂದ್ರ ವಿಭಾಗದ ಮಹಿಳಾ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಶೇಷ ತಂಡ ರಚಿಸಿ ಮಂಗಳವಾರ ಬೆಳಿಗ್ಗೆ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.