ನಾಗಮಂಗಲ: ದುಷ್ಕರ್ಮಿಗಳು ಹತ್ತಾರು ಮಂಗಗಳಿಗೆ ವಿಷವಿಕ್ಕಿ ಹತ್ಯೆ ಮಾಡಿ ಬಿಸಾಕಿ ಹೋಗಿರುವ ಆಘಾತಕಾರಿ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಹೊಣಕೆರೆ ಹೋಬಳಿಯ ದೇವನಹೊಸೂರು ಗ್ರಾಮದಲ್ಲಿ ನಡೆದಿದೆ.
ಮಂಗಳವಾರ ಮುಂಜಾನೆ 9 ಸುಮಾರಿಗೆ ರವಿ ಎಂಬುವವರು ಬಹಿರ್ದೆಸೆಗೆ ಹೊರಗೆ ಬಂದಾಂಗ ರಸ್ತೆಬದಿಯಲ್ಲಿ ಸಾಲು ಸಾಲಾಗಿ ಮಂಗಗಳು ಸತ್ತುಬಿದ್ದಿರುವುದನ್ನು ಕಂಡಾಗ ಪ್ರಕರಣ ಬೆಳಕಿಗೆ ಬಂದಿದೆ.
ಜುಟ್ಟನಹಳ್ಳಿ, ದೇವನಹೊಸೂರು ಗ್ರಾಮದ ಜನರಿಗೆ ವಿಷಯ ತಿಳಿಸಿದ್ದು ಯಾರೋ ದುಷ್ಕರ್ಮಿಗಳು ವಿಷಹಾಕಿ ಕೊಂದು ಚೀಲದಲ್ಲಿ ತುಂಬಿ ಎಸೆದು ಹೋಗಿರಬಹುದೆಂದು ಶಂಕಿಸಲಾಗಿದೆ.
ನೂರಾರು ಜನ ಸೇರಿ ಮಂಗಗಳ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದು ಅರಣ್ಯ ಅಧಿಕಾರಿಗಳ ಸಹಾಯದಿಂದ ಅಂತ್ಯಕ್ರಿಯೆ ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ.
ಗ್ರಾಮಸ್ಥರು ಶಾಸ್ತ್ರೋಕ್ತವಾಗಿ ಸಂಸ್ಕಾರ ಮಾಡಿ ಆ ಜಾಗದಲ್ಲಿ ದೇವಸ್ಥಾನ ನಿರ್ಮಿಸಲು ಮುಂದಾಗಿದ್ದು, ಸುತ್ತಮುತ್ತ ಗ್ರಾಮಗಳ ಜನ ಜೇಸಿಬಿ ತಂದು ಹಳ್ಳ ತೆಗೆದು ಪೂಜೆ ಪುನಸ್ಕಾರ ಸಲ್ಲಿಸಿ ಮಂಗಗಳ ಅಂತ್ಯ ಸಂಸ್ಕಾರ ನೆರವೇರಿಸಿದರು.