ವಿದ್ಯಾರ್ಥಿಯೊಬ್ಬ ಗರಿಷ್ಠ 200 ಅಂಕಕ್ಕೆ ನಡೆದ ಪರೀಕ್ಷೆಯಲ್ಲಿ 212 ಅಂಕ ಪಡೆದ ಘಟನೆ ಗುಜರಾತ್ ನ ದಾಹೋಡ್ ಜಿಲ್ಲೆಯಲ್ಲಿ ನಡೆದಿದ್ದು, ರಾಜ್ಯದ ಶಿಕ್ಷಣ ವ್ಯವಸ್ಥೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿದೆ.
4ನೇ ತರಗತಿ ವಿದ್ಯಾರ್ಥಿ ವಂಶಿಬೇನ್ ಮನೀಶ್ ಭಾಯ್ ಎರಡು ವಿಷಯಗಳಲ್ಲಿ ಗರಿಷ್ಠ ಅಂಕಕ್ಕಿಂತ ಅಧಿಕ ಅಂಕ ಪಡೆದಿದ್ದಾರೆ. ವಿದ್ಯಾರ್ಥಿ ಹಾಗೂ ಪೋಷಕರೇ ಮಗನ ಅಂಕಪಟ್ಟಿ ನೋಡಿ ಅಚ್ಚರಿಗೊಳಗಾಗಿದ್ದಾರೆ.
ಗುಜರಾತಿ ವಿಷಯದಲ್ಲಿ 200ಕ್ಕೆ 211 ಮತ್ತು ಗಣಿತದಲ್ಲಿ 200ಕ್ಕೆ 212 ಅಂಕ ಪಡೆದಿದ್ದಾರೆ. ಇದರಿಂದ ಗುಜರಾತ್ ಶಿಕ್ಷಣ ವ್ಯವಸ್ಥೆ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಸಾಕಷ್ಟು ದೂರುಗಳು ಬಂದ ನಂತರ ಅಂಕಪಟ್ಟಿಯನ್ನು ಪರಿಷ್ಕೃತಗೊಳಿಸಿದ್ದು, 200ಕ್ಕೆ 191 ಮತ್ತು 200ಕ್ಕೆ 190 ಅಂಕ ನೀಡಲಾಗಿದೆ. ಒಟ್ಟಾರೆ 1000 ಅಂಕಗಳ ಪೈಕಿ 934 ಅಂಕ ಸಿಕ್ಕಿದೆ.