ಮದ್ದೂರಮ್ಮ ಜಾತ್ರೆಯಲ್ಲಿ ತೇರು ಉರುಳಿಬಿದ್ದ ಪರಿಣಾಮ ಮೂವರು ಭಕ್ತರು ಮೃತಪಟ್ಟ ದಾರುಣ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹುಸ್ಕೂರಿನಲ್ಲಿ ಸಂಭವಿಸಿದೆ.
ಮದ್ದೂರಮ್ಮ ಜಾತ್ರೆಯಲ್ಲಿ ಶನಿವಾರ ಕುರ್ಜುಗಳು (ತೇರು) ಉರುಳಿಬಿದ್ದಾಗ ಗಾಯಗೊಂಡಿದ್ದ ಯುವತಿ ಮೃತ ಪಟ್ಟಿದ್ದಾರೆ. ಕುರ್ಜು ಕೆಳಗೆ ಸಿಲುಕಿ 28ರ ಯುವಕ ಲೋಹಿತ್, ಜ್ಯೋತಿ ಹಾಗೂ ರಾಕೇಶ್ ಮೃತಪಟ್ಟ ದುರ್ದೈವಿಗಳು. ಘಟನೆಯಲ್ಲಿ ಇನ್ನಿಬ್ಬರಿಗೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಾತ್ರೆಗೆ ಸುತ್ತಮುತ್ತಲ ಗ್ರಾಮಗಳಿಂದ 150ಕ್ಕೂ ಹೆಚ್ಚು ಅಡಿ ಎತ್ತರದ ಕುರ್ಜುಗಳು ಆಗಮಿಸಿದ್ದವು. ತೇರು ಎಳೆದು ತರುವ ಸಂದರ್ಭದಲ್ಲಿ ಭಾರೀ ಗಾಳಿಯ ಕಾರಣ ತೇರು ಅಡ್ಡ ಬಿದ್ದಿದೆ.
ಮದ್ದೂರಮ್ಮ ಜಾತ್ರೆಗೆ 200 ವರ್ಷಗಳ ಇತಿಹಾಸವಿದೆ. ಟ್ರ್ಯಾಕ್ಟರ್ ಹಾಗೂ ನೂರಾರು ಎತ್ತುಗಳ ಮೂಲಕ ಎಳೆದು ಕುರ್ಜು ತರುವ ಹೆಸರಾಂತ ಜಾತ್ರೆ ಇದು. ಅತಿ ಎತ್ತರ ತೇರು ಕಟ್ಟಿ ಎಳೆದು ತರುವ ಜಾತ್ರೆ ನೋಡಲು ಲಕ್ಷಾಂತರ ಜನ ಆಗಮಿಸುತ್ತಾರೆ. ಈ ಅವಘಡ, ಸಾವುಗಳಿಂದಾಗಿ ಜಾತ್ರೆಮಯ ಸಂಭ್ರಮದ ಬದಲು ಸೂತಕದ ಛಾಯೆ ಆವರಿಸಿದೆ.



