ಜಿನಿವಾ: ವಿಶ್ವಸಂಸ್ಥೆಯು ಸಂತೋಷ ಸೂಚ್ಯಂಕದ ವರದಿಯನ್ನು ಬಿಡುಗಡೆ ಮಾಡಿದ್ದು, ಅದರಂತೆ ಫಿನ್‌ಲೆಂಡ್ ವಿಶ್ವದ ಅತ್ಯಂತ ಸಂತೋಷಭರಿತ ದೇಶವಾಗಿ ಹೊರಹೊಮ್ಮಿದೆ.
ಫಿನ್‌ಲೆಂಡ್ ದೇಶವು ಸತತ ಎಂಟನೇ ವರ್ಷವೂ ಪ್ರಥಮ ಸ್ಥಾನವನ್ನು ಕಾಯ್ದುಕೊಂಡಿದೆ. ಪ್ರತಿವರ್ಷ ಮಾರ್ಚ್ ೨೦ರಂದು ವಿಶ್ವ ಸಂತೋಷ ದಿನವನ್ನು ಆಚರಿಸಲಾಗುತ್ತದೆ.
ಕಳೆದ ೧೦ ವರ್ಷಗಳಿಂದ ವಿಶ್ವಸಂಸ್ಥೆಯು ಇದೇ ದಿನದಂದು ವರದಿಯನ್ನು ಪ್ರಕಟಿಸುತ್ತಿದೆ. ಯಾವ ದೇಶಗಳಲ್ಲಿ ಜನರು ಎಷ್ಟು ಸಂತೋಷವಾಗಿದ್ದಾರೆ ಎಂಬುದನ್ನು ಸಂತೋಷ ಸೂಚ್ಯಂಕದ ವರದಿಯು ಬಹಿರಂಗಪಡಿಸುತ್ತದೆ.
ಭಾರತದ ಸ್ಥಾನ ಎಷ್ಟಿದೆ?: 147 ದೇಶಗಳಲ್ಲಿ ಸಮೀಕ್ಷೆ ನಡೆಸುವ ಮೂಲಕ ಈ ಸಂತೋಷ ಸೂಚ್ಯಂಕದ ವರದಿಯನ್ನು ಸಿದ್ಧಪಡಿಸಲಾಗಿದೆ.
2025ರ ಸಂತೋಷ ಸೂಚ್ಯಂಕದ ವರದಿಯಲ್ಲಿ, 147 ದೇಶಗಳ ಪೈಕಿ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ಭಾರತವು 114ನೇ ಸ್ಥಾನದಲ್ಲಿದೆ. ಕಳೆದ ವರ್ಷಕ್ಕಿಂತ ಕೊಂಚ ಸುಧಾರಿಸಿದೆ.
2024ರ ಹ್ಯಾಪಿನೆಸ್ ರಿಪೋರ್ಟ್ನಲ್ಲಿ ಭಾರತವು 126ನೇ ಸ್ಥಾನದಲ್ಲಿತ್ತು. 2025ರಲ್ಲಿ ಭಾರತವು 8 ಸ್ಥಾನ ಮೇಲಕ್ಕೇರಿದೆ. ವಿಶ್ವ ಸಂತೋಷ ವರದಿ ಎಂಬ ವಾರ್ಷಿಕ ವರದಿಯನ್ನು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಪರಿಹಾರ ವಿಭಾಗವು ಪ್ರಕಟಿಸಿದೆ.
ಟಾಪ್ 10 ಶ್ರೇಯಾಂಕದಲ್ಲಿ ಇಸ್ರೇಲ್: ಫಿನ್‌ಲೆಂಡ್ ಮೊದಲ ಸ್ಥಾನ ಪಡೆದುಕೊಂಡಿದೆ. ಡೆನ್ಮಾರ್ಕ್, ಐಸ್ಲ್ಯಾಂಡ್ ಮತ್ತು ಸ್ವೀಡನ್ ನಂತರದ ಸ್ಥಾನಗಳಲ್ಲಿವೆ.
ಮತ್ತೊಂದೆಡೆ, ಭೀಕರ ಅಂತರ್ಯುದ್ಧದಲ್ಲಿ ಸಿಲುಕಿರುವ ಅಫ್ಘಾನಿಸ್ತಾನ ಮತ್ತೊಮ್ಮೆ ಸಂತೋಷದ ರಾಷ್ಟ್ರಗಳ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದುಕೊಂಡಿದ್ದು, 147ನೇ ಸ್ಥಾನದಲ್ಲಿದ್ದು, ಪಶ್ಚಿಮ ಆಫ್ರಿಕಾದ ಸಿಯೆರಾ ಲಿಯೋನ್ (146) ಮತ್ತು ಲೆಬನಾನ್ (145) ಹಿಂದಿನ ಸ್ಥಾನದಲ್ಲಿವೆ.
ಹಮಾಸ್ ಜೊತೆ ಯುದ್ಧ ನಡೆಸಿದ್ದರೂ ಕೂಡ ಇಸ್ರೇಲ್ ದೇಶವು ಎಂಟನೇ ಸ್ಥಾನದಲ್ಲಿದೆ. ಕೋಸ್ಟಾ ರಿಕಾ ಮತ್ತು ಮೆಕ್ಸಿಕೊ ಕೂಡ ಮೊದಲ ಬಾರಿಗೆ ಅಗ್ರ ಹತ್ತು ಸ್ಥಾನಗಳಲ್ಲಿದ್ದು, ಈ ದೇಶಗಳು ಕ್ರಮವಾಗಿ 6 ಮತ್ತು 10ನೇ ಶ್ರೇಯಾಂಕದಲ್ಲಿವೆ.
ಸಂತೋಷ ಸೂಚ್ಯಂಕ ಅಳೆಯೋದು ಹೇಗೆ?: ಪ್ರತಿ ದೇಶದಿಂದ ಒಂದರಿಂದ ಮೂರು ಸಾವಿರ ಜನರ ಮಾದರಿ ಗಾತ್ರವನ್ನು ಆಯ್ಕೆ ಮಾಡಲಾಗುತ್ತದೆ. ಅವರಿಗೆ ಕೇಳಲಾದ ಪ್ರಶ್ನೆಗಳ ಆಧಾರದ ಮೇಲೆ ಮಾಹಿತಿ ರಚಿಸಲಾಗುತ್ತದೆ.
ಈ ಪ್ರಶ್ನೆಗಳಿಗೆ 0 ರಿಂದ 10 ರವರೆಗಿನ ರೇಟಿಂಗ್ನಲ್ಲಿ ಉತ್ತರಿಸಬೇಕು. 0 ಎಂದರೆ ಕೆಟ್ಟದು, 10 ಎಂದರೆ ಅತ್ಯುತ್ತಮ ಅನುಭವ. ಸಂಪತ್ತು ಮತ್ತು ಅಭಿವೃದ್ಧಿ ಮಾತ್ರವಲ್ಲ, ಸಂಬಂಧಗಳು, ಜನರ ನಡುವಿನ ನಂಬಿಕೆ, ಆತ್ಮತೃಪ್ತಿ, ಸಾಮಾಜಿಕ ಬೆಂಬಲ, ಜೀವಿತಾವಧಿ, ಸ್ವಾತಂತ್ರ್ಯ, ಔದಾರ್ಯ ಮತ್ತು ಭ್ರಷ್ಟಾಚಾರ ಇವೆಲ್ಲವೂ ಅವುಗಳ ಮೇಲೆ ಆಧಾರಿತವಾದ ಅಂಶಗಳು ಸೇರಿರುತ್ತವೆ.



