Wednesday, September 30, 2026
Google search engine
Homeವಿದೇಶಪೈಲೆಟ್ ಗಳ ಬಡಿದಾಟ: 180 ಪ್ರಯಾಣಿಕರ ಪರದಾಟ!

ಪೈಲೆಟ್ ಗಳ ಬಡಿದಾಟ: 180 ಪ್ರಯಾಣಿಕರ ಪರದಾಟ!

ಟೆಲ್ ಅವಿವ್, ಇಸ್ರೇಲ್: ಪೈಲೆಟ್ ಗಳ ನಡುವೆ ಕಾಕ್ ಪಿಟ್ ನಲ್ಲಿ ನಡೆದ ಹೊಡೆದಾಟ ವಿಕೋಪಕ್ಕೆ ತಿರುಗಿದ್ದು, ಇದರಿಂದ ಹಾರಾಡುತ್ತಿದ್ದ ವಿಮಾನ ದಿಢೀರನೆ 17 ಸಾವಿರ ಅಡಿ ಕುಸಿದಿದ್ದರಿಂದ ಪ್ರಯಾಣಿಕರು ಭೀತಿಗೆ ಒಳಗಾದರೆ, ಉಗ್ರರಿಂದ ಹೈಜಾಕ್ ಭೀತಿಯಿಂದ ಅಧಿಕಾರಿಗಳು ತತ್ತರಿಸಿದ್ದಾರೆ.

ಯುನೈಟೆಡ್ ಅರಬ್ ಎಮಿರೇಟ್ಸ್‌ನ ದುಬೈನಿಂದ ಇಸ್ರೇಲ್‌ಗೆ ಪ್ರಯಾಣಿಸುತ್ತಿದ್ದ ವಾಣಿಜ್ಯ ವಿಮಾನ ಬುಧವಾರ ಸೌದಿ ಅರೇಬಿಯಾದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಇದು ಹೈಜಾಕ್‌ ಭೀತಿ ಹುಟ್ಟುಹಾಕಿತ್ತು ಮತ್ತು ಇಸ್ರೇಲ್ ಯುದ್ಧವಿಮಾನಗಳು ರಕ್ಷಣೆಗೆ ಮುಂದಾಗುವಂತೆ ಮಾಡಿತ್ತು. ಅಲ್ಲದೇ ಯುದ್ಧದ ಕಾರ್ಮೋಡದ ನಡುವೆ ಮತ್ತಷ್ಟು ದಾಳಿ- ಪ್ರತಿದಾಳಿಯ ಆತಂಕ ಹೆಚ್ಚಿಸಿತ್ತು.

ವಿಮಾನದ ಇಬ್ಬರು ಪೈಲಟ್‌ಗಳ ನಡುವಿನ ಜಗಳದಿಂದ ಈ ಘಟನೆ ಸಂಭವಿಸಿದೆ ಮತ್ತು ವಿಮಾನದಲ್ಲಿದ್ದ ಎಲ್ಲ 180 ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಭದ್ರತಾ ಅಧಿಕಾರಿಗಳನ್ನು ಉಲ್ಲೇಖಿಸಿ ಇಸ್ರೇಲಿ ಮಾಧ್ಯಮಗಳು ವರದಿ ಮಾಡಿವೆ.

ವಿಮಾನವು ರಾಜ್ಯದ ನಾಗರಿಕ ಮತ್ತು ಮಿಲಿಟರಿ ನೆಲೆಯಾದ ತಬುಕ್‌ನಲ್ಲಿ ಸುರಕ್ಷಿತವಾಗಿ ತುರ್ತು ಲ್ಯಾಂಡಿಂಗ್ ಮಾಡಿದೆ. ಸಾರ್ವಜನಿಕವಾಗಿ ಲಭ್ಯವಿರುವ ವಿಮಾನ ಟ್ರ್ಯಾಕಿಂಗ್ ಮಾಹಿತಿಯ ಪ್ರಕಾರ, ಫ್ಲೈ ದುಬೈ ವಿಮಾನವು ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ತುರ್ತು ಎಚ್ಚರಿಕೆಯನ್ನು ರವಾನಿಸಿದೆ.

ವಿಮಾನ ಟೇಕಾಫ್ ಆದ ಸ್ವಲ್ಪ ಸಮಯದ ನಂತರ ಕಾಕ್‌ಪಿಟ್‌ನಲ್ಲಿ ಇಬ್ಬರು ಪೈಲಟ್ ಗಳ ನಡುವೆ ಜಗಳ ಪ್ರಾರಂಭವಾಗಿದೆ. ಜಗಳ ವಿಕೋಪಕ್ಕೆ ಹೋಗಿದ್ದು, ಇಬ್ಬರ ನಡುವೆ ರಕ್ತಸಿಕ್ತ ಮಾರಾಮಾರಿ ನಡೆದಿದೆ. ಈ ವೇಳೆ ಓರ್ವ ಪೈಲಟ್ ವಿಮಾನ ಹಾರಾಟದ ಸಂದರ್ಭದಲ್ಲಿ ‘7500’ ಎಮರ್ಜೆನ್ಸಿ ಕೋಡ್ ಒತ್ತಿದ್ದಾರೆ ಎಂದು ಪ್ರಾದೇಶಿಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

7500’ ಕೋಡ್ ಹೈಜಾಕ್‌ ಸೂಚಿಸುವ ಅಂತಾರಾಷ್ಟ್ರೀಯ ಎಚ್ಚರಿಕೆಯಾಗಿದೆ. ಬಳಿಕ ವಿಮಾನ ಸೌದಿ ಅರೇಬಿಯಾ ವಾಯುಪ್ರದೇಶದತ್ತ ಡೈವರ್ಟ್ ಮಾಡಲಾಗಿದ್ದು, ಅಂತಿಮವಾಗಿ ವಿಮಾನ ಸುರಕ್ಷಿತವಾಗಿ ಸೌದಿಯಲ್ಲಿ ಲ್ಯಾಂಡ್ ಆಗಿದೆ.

ಪೈಲಟ್ ಗಳ ಜಗಳಕ್ಕೆ ಕಾರಣವೇನೆಂದು ತಕ್ಷಣ ಸ್ಪಷ್ಟವಾಗಿ ತಿಳಿದು ಬಂದಿಲ್ಲ. ವಿಮಾನವನ್ನು ಅದರ ನಿಗದಿತ ಮಾರ್ಗದಿಂದ ಬೇರೆಡೆಗೆ ತಿರುಗಿಸಿದ ನಂತರ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಭದ್ರತಾ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದಾರೆ.

ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಮತ್ತು ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆತರಲು ಇಸ್ರೇಲ್ ಕೆಲಸ ಮಾಡುತ್ತಿದೆ ಎಂದು ನೆತನ್ಯಾಹು ಅವರ ಕಚೇರಿ ತಿಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments