ಮೊಬೈಲ್ ನಿಂದ ಎಷ್ಟು ಜೀವ-ಜೀವನಗಳು ಹಾಳುಗುತ್ತಿವೆ ಎಂಬುದು ನಿರೀಕ್ಷಿಸುವುದು ಕಷ್ಟವಾಗಿದೆ. ಮೊಬೈಲ್ ಚಟದಿಂದ ಮಗಳ ಜೊತೆ ಮದುವೆ ಆಗಬೇಕಿದ್ದ ಭಾವಿ ಅಳಿಯನ ಜೊತೆ ತಾಯಿಯೇ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಏಪ್ರಿಲ್ 16ರಂದು ಮಗಳ ಮದುವೆ ನಿಶ್ಚಿಯವಾಗಿತ್ತು. ಆದರೆ ಮದುವೆ ಆಗಬೇಕಿದ್ದ ಭಾವಿ ಅಳಿಯನೊಂದಿಗೆ ತಾಯಿ 2.5 ಲಕ್ಷ ರೂ. ಹಣ ಹಾಗೂ ಚಿನ್ನಾಭರಣ ಜೊತೆ ಪರಾರಿಯಾಗಿದ್ದಾಳೆ. ಈ ಘಟನೆ ಉತ್ತರಪ್ರದೇಶದ ಅಲಿಘಡದ ಮಂಡ್ರಾಕ್ ಪ್ರದೇಶದಲ್ಲಿ ನಡೆದಿದೆ.
ಮದುವೆ ನಿಶ್ಚಯವಾಗಿದ್ದ ಯುವಕ ವಧುವಿನ ಮನೆಗೆ ನಿಯಮಿತವಾಗಿ ಬರುತ್ತಿದ್ದ. ಭಾವಿ ಅತ್ತೆಗೆ ಮೊಬೈಲ್ ಫೋನ್ ಉಡುಗೊರೆಯಾಗಿ ನೀಡಿದ್ದ. ನಂತರ ಇಬ್ಬರೂ ನಿರಂತರ ಸಂಪರ್ಕದಲ್ಲಿದ್ದರು. ಈಗ ಇದೇ ಎರಡೂ ಕುಟುಂಬಗಳ ಬಾಳಿನಲ್ಲಿ ಬಿರುಗಾಳಿ ಬೀಸಿದೆ.
ಗಂಡು-ಹೆಣ್ಣಿನ ಮನೆಯವರು ಮದುವೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಕಳೆದ ಭಾನುವಾರ ಮದುಮಗ ಬಟ್ಟೆ ಖರೀದಿಸಲು ಹೋಗುವುದಾಗಿ ಹೇಳಿ ಮನೆ ಯಿಂದ ಹೊರಟಿದ್ದ. ನಂತರ ತಂದೆಗೆ ಕರೆ ಮಾಡಿ, ‘ನಾನು ಮನೆ ಬಿಟ್ಟು ಹೋಗುತ್ತಿದ್ದೇನೆ. ನನ್ನನ್ನು ಹುಡುಕಲು ಪ್ರಯತ್ನಿಸಬೇಡಿʼ ಎಂದು ಹೇಳಿದ್ದಾನೆ. ಅದೇ ಸಮಯದಲ್ಲಿ ವಧುವಿನ ತಾಯಿ ಕೂಡ ಯಾವುದೇ ಮಾಹಿತಿ ನೀಡದೆ ಮನೆಯಿಂದ ಹೊರಟಿದ್ದಾಳೆ. ಇಬ್ಬರೂ ಒಟ್ಟಿಗೆ ಓಡಿಹೋಗಿರುವುದು ತನಿಖೆಯಿಂದ ತಿಳಿದು ಬಂದಿದೆ.
ಈ ಸಂಬಂಧ ಮಹಿಳೆಯ ಪತಿ ದೂರು ದಾಖಲಿಸಿದ್ದಾರೆ, ಎರಡೂ ಕುಟುಂಬಗಳ ಹೇಳಿಕೆ ಪಡೆದು ತನಿಖೆ ಪ್ರಾರಂಭಿಸಿದ್ದೇವೆ. ತಲೆಮರೆಸಿಕೊಂಡಿರುವ ಜೋಡಿ ಯನ್ನು ಪತ್ತೆಹಚ್ಚಲು ಪ್ರಯತ್ನಗಳು ನಡೆಯುತ್ತಿವೆ ಎಂದು ಮಂಡ್ರಾಕ್ ಪೊಲೀಸ್ ಠಾಣಾಧಿಕಾರಿ ಅರವಿಂದ್ ಕುಮಾರ್ ತಿಳಿಸಿದ್ದಾರೆ. ಮದುವೆಯಾಗಬೇಕಿದ್ದ ಯುವಕ ಉತ್ತರಾಖಂಡದಲ್ಲಿ ಕೆಲಸ ಮಾಡುತ್ತಿದ್ದಾನೆ ಎನ್ನಲಾಗಿದೆ.
ವಿಶೇಷ ತನಿಖಾ ತಂಡವನ್ನು ತಂಡವನ್ನು ಉತ್ತರಾಖಂಡಕ್ಕೆ ಕಳುಹಿಸಲಾಗಿದೆ. ಹೆಚ್ಚಿನ ತನಿಖೆಗಾಗಿ ಬಸ್ ನಿಲ್ದಾಣಗಳು ಮತ್ತು ರೈಲು ನಿಲ್ದಾಣಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.



