ಪತ್ನಿಯಿಂದ ವಿಚ್ಛೇದನ ಸಿಕ್ಕಿದ್ದರಿಂದ ಸ್ವಾತಂತ್ರ್ಯ ಸಿಕ್ಕ ಖುಷಿಯಲ್ಲಿ ಪತಿ ಹಾಲಿನಲ್ಲಿ ಸ್ನಾನ ಮಾಡಿ ಸಂಭ್ರಮಿಸಿದ ಘಟನೆ ಅಸ್ಸಾಂನಲ್ಲಿ ನಡೆದಿದೆ.
ದೀರ್ಘಕಾಲ ಕಾಯುವಿಕೆಯಿಂದ ನಲ್ಬಾರಿ ಜಿಲ್ಲೆಯಲ್ಲಿ ಮಾಣಿಕ್ ಅಲಿ ಎಂಬಾತ ಪತ್ನಿಯಿಂದ ವಿಚ್ಚೇದನ ಪಡೆದಿದ್ದು, ಕೊನೆಗೂ ಪತ್ನಿಯಿಂದ ಸ್ವಾತಂತ್ರ್ಯ ಸಿಕ್ಕ ಖುಷಿಯಲ್ಲಿ ಮನೆಯ ಹೊರಗೆ ಹಾಲಿನಲ್ಲಿ ಸ್ನಾನ ಮಾಡಿ ಸಂಭ್ರಮಿಸಿದ್ದಾನೆ.
ಮಾಣಿಕ್ ಅಲಿ ಮನೆಯ ಮುಂದೆ ನಾಲ್ಕು ಬಕೆಟ್ ಗಳಲ್ಲಿ ತುಂಬಿದ 40 ಲೀಟರ್ ಹಾಲನ್ನು ಒಂದರ ನಂತರ ಒಂದರಂತೆ ಮೈಮೇಲೆ ಸುರಿದುಕೊಂಡು ಸ್ನಾನ ಮಾಡುವ ಮೂಲಕ ವಿಚ್ಛೇದನದ ಸಂಭ್ರಮ ಆಚರಿಸಿದ್ದಾನೆ.
ಇವತ್ತಿನಿಂದ ನಾನು ಸ್ವಾತಂತ್ರ ಎಂದು ಕೂಗಿಕೊಂಡು ಮಾಣಿಕ್ ಅಲಿ ಹಾಲಿನಲ್ಲಿ ಸ್ನಾನ ಮಾಡುತ್ತಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನನ್ನ ಹೆಂಡತಿ ಬೇರೋಬ್ಬನ ಜೊತೆ ಓಡಿ ಹೋದಳು. ಕುಟುಂಬದ ಹಿತದೃಷ್ಟಿಯಿಂದ ಇಷ್ಟು ದಿನ ಎಲ್ಲವನ್ನೂ ಮೌನವಾಗಿ ಸಹಿಸಿಕೊಂಡಿದ್ದೆ ಎಂದು ಪತಿ ಹೇಳಿಕೊಂಡಿದ್ದಾನೆ.
ವಿಚ್ಛೇದನ ದೊರೆಯುವ ಮುನ್ನ ಪತ್ನಿ ಎರಡು ಬಾರಿ ಬೇರೋಬ್ಬನ ಜೋತೆ ಓಡಿ ಹೋಗಿದ್ದಳು. ಇದರಿಂದ ಸಾಕಷ್ಟು ಮುಜುಗರ ಹಾಗೂ ಅಪಮಾನಕ್ಕೆ ಒಳಗಾಗಿದ್ದರೂ ಕುಟುಂಬದ ಹಿತದೃಷ್ಟಿಯಿಂದ ಮಾಣಿಕ್ ಎಲ್ಲವನ್ನೂ ಮೌನವಾಗಿ ಸಹಿಸಿಕೊಂಡಿದ್ದ.
ನನ್ನ ವಕೀಲರು ನಿನ್ನೆ ವಿಚ್ಛೇದನ ಪ್ರಕ್ರಿಯೆ ಎಲ್ಲಾ ಮುಗಿದಿದ್ದು, ಎಲ್ಲವೂ ನಿರ್ಧಾರವಾಗಿದೆ ಎಂದು ಹೇಳಿದರು. ಆದ್ದರಿಂದ ನಾನು ಈ ಸಂಭ್ರಮದ ಕ್ಷಣವನ್ನು ಆಚರಿಸಲು ನಿರ್ಧರಿಸಿದೆ ಎಂದು ಮಾಣಿಕ ಹೇಳಿಕೊಂಡಿದ್ದಾರೆ.


