ರಾಯಚೂರು: ಆಗಸ್ಟ್ 8ರಿಂದ 14ವರೆಗೆ 7 ದಿನಗಳ ಕಾಲ ಮಂತ್ರಾಯದಲ್ಲಿ ಗುರು ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವ ಅದ್ಧೂರಿಯಾಗಿ ಜರುಗಲಿದೆ.
ರಾಯರ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದು, ಆಗಸಗ್ಟ್ 8ರಂದು ಧ್ವಜಾರೋಹಣದೊಂದಿಗೆ ಆರಾಧನಾ ಮಹೋತ್ಸವಕ್ಕೆ ಚಾಲನೆ ಸಿಗಲಿದೆ ಎಂದರು.
ಆಗಸ್ಟ್ 10ಕ್ಕೆ ಪೂರ್ವಾರಾಧನೆ, 11ಕ್ಕೆ ಮಧ್ಯಾರಾಧನೆ, 12ಕ್ಕೆ ಉತ್ತರಾಧನೆ ನಡೆಯಲಿದೆ ಎಂದು ಅವರು ವಿವರಿಸಿದರು.
ಆಗಸ್ಟ್ 8ರಂದು ಪ್ರತಿವರ್ಷದಂತೆ ತಿರುಮಲ ತಿರುಪತಿ ದೇವಸ್ಥಾನದಿಂದ ಬರುವ ಶ್ರೀನಿವಾಸ ದೇವರ ಶೇಷವಸ್ತ್ರವನ್ನ ರಾಯರ ಮೂಲ ಬೃಂದಾವನಕ್ಕೆ ಸಮರ್ಪಿಸಲಾಗುವುದು. ನಾನಾ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಿಗೆ ಆಗಸ್ಟ್ 10ರಂದು ರಾಘವೇಂದ್ರ ಗುರು ಅನುಗ್ರಹ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಆಗಸ್ಟ್ 12ರಂದು ಬೆಳಿಗ್ಗೆ 10 ಗಂಟೆಗೆ ಶ್ರೀಮಠದ ಮುಂದಿನ ರಾಜಬೀದಿಯಲ್ಲಿ ಮಹಾರಥೋತ್ಸವ ನಡೆಯಲಿದೆ. ಇದೇ ವೇಳೆ ರಾಯರ ಮೂಲ ಬೃಂದಾವನಕ್ಕೆ ನವರತ್ನ ಕವಚ ಸಮರ್ಪಣೆ ಮಾಡಲಾಗುವುದು. ಮಹಾ ರಥೋತ್ಸವ ವೇಳೆ ಹೆಲಿಕಾಪ್ಟರ್ ಮೂಲಕ ರಥಕ್ಕೆ ಪುಷ್ಪ ವೃಷ್ಠಿ ನಡೆಸಲಾಗುವುದು ಎಂದು ತಿಳಿಸಿದ್ದಾರೆ.



