ನಾಯಕ ಲಿಯೊನೆಲ್ ಮೆಸ್ಸಿ ಕೊನೆಯ ಕ್ಷಣದಲ್ಲಿ ತೋರಿದ ಸ್ಫೂರ್ತಿಯುತ ಆಟದ ನೆರವಿನಿಂದ ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡ 3-2 ಗೋಲುಗಳಿಂದ ಈಜಿಪ್ಟ್ ವಿರುದ್ಧ ಸೋಲಿನ ದವಡೆಯಿಂದ ಪಾರಾಗಿ ನಿಟ್ಟುಸಿರುಬಿಟ್ಟಿದೆ.
ಮಂಗಳವಾರ ತಡರಾತ್ರಿ ನಡೆದ ಫಿಫಾ ವಿಶ್ವಕಪ್ ಪ್ರೀಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ತಂಡ ಪಂದ್ಯದ ಕೊನೆಯ ಕ್ಷಣದವರೆಗೂ 0-2 ಗೋಲುಗಳಿಂದ ಹಿನ್ನಡೆ ಅನುಭವಿಸಿತ್ತು. ಆದರೆ ಕೊನೆಯ ೧೫ ನಿಮಿಷಗಳ ಅಂತರದಲ್ಲಿ ಮೂರು ಗೋಲು ಸಿಡಿಸಿ ರೋಚಕ ಜಯ ಸಾಧಿಸಿತು.
ಅರ್ಜೆಂಟೀನಾ ಪರ ಕ್ರಿಸ್ಟಿಯಾನೊ ರೊಮೆರೊ (79ನೇ ನಿಮಿಷ), ಲಿಯೊನೆಲ್ ಮೆಸ್ಸಿ (83ನೇ ನಿಮಿಷ) ಹಾಗೂ ಎನ್ಜೊ ಫೆರ್ನಾಂಡೆಜ್ (90+3ನೇ ನಿಮಿಷ) ಹೆಚ್ಚುವರಿ ಆಟದಲ್ಲಿ ಸಿಡಿಸಿದ ಗೋಲಿನ ನೆರವಿನಿಂದ ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತು.
ಇದಕ್ಕೂ ಮುನ್ನ ಪಂದ್ಯದ ಎರಡೂ ಅವಧಿಯ ಆಟಗಳಲ್ಲಿ ಪ್ರಾಬಲ್ಯ ಸಾಧಿಸಿದ್ದ ಈಜಿಪ್ಟ್ ಪರ ೧೫ನೇ ನಿಮಿಷದಲ್ಲಿ ಯೆಸ್ಸೆರ್ ಇಬ್ರಾಹಿಂ ಮೊದಲ ಗೋಲು ದಾಖಲಿಸಿದರೆ ನಾಯಕ ಮೊಜ್ತಬಾ ಜಿಕೊ ೬೭ನೇ ನಿಮಿಷದಲ್ಲಿ ಗೋಲು ಬಾರಿಸಿ ಮುನ್ನಡೆ ತಂದುಕೊಟ್ಟಾಗ ಅರ್ಜೆಂಟೀನಾ ಆಘಾತದಿಂದ ತತ್ತರಿಸಿತು.
ಆದರೆ 79ನೇ ನಿಮಿಷದಲ್ಲಿ ಕಾರ್ನರ್ ಮೂಲಕ ಸಿಡಿಸಿದ ಚೆಂಡನ್ನು ರೊಮೆರೊ ಹೆಡ್ ಮಾಡಿ ಗೋಲಿನ ಖಾತೆ ತೆರೆದರೆ, ಮೆಸ್ಸಿ 83ನೇ ನಿಮಿಷದಲ್ಲಿ ತಮ್ಮ ಕಾಲ್ಚಳಕದಿಂದ ಗೋಲು ಸಿಡಿಸಿ ಸಮಬಲ ಸಾಧಿಸುವ ಮೂಲಕ ಹೋರಾಟಕ್ಕೆ ಕಾವು ನೀಡಿದರು.
ಪಂದ್ಯದ ಹೆಚ್ಚುವರಿ ಸಮಯದಲ್ಲಿ ಅರ್ಜೆಂಟೀನಾ ಮತ್ತೊಂದು ಗೋಲು ಸಿಡಿಸಿ ರೋಚಕ ಸಾಧಿಸಿ ಪ್ರಶಸ್ತಿಯತ್ತ ಮತ್ತೊಂದು ದಿಟ್ಟ ಹೆಜ್ಜೆ ಇಟ್ಟಿತು.



