Thursday, May 14, 2026
Google search engine
Homeದೇಶಜಮ್ಮು ಕಾಶ್ಮೀರದಲ್ಲಿ ಮೇಘಸ್ಫೋಟ, ಭೂಕುಸಿತ: 5 ಮಕ್ಕಳು ಸೇರಿ 11 ಮಂದಿ ದುರ್ಮರಣ

ಜಮ್ಮು ಕಾಶ್ಮೀರದಲ್ಲಿ ಮೇಘಸ್ಫೋಟ, ಭೂಕುಸಿತ: 5 ಮಕ್ಕಳು ಸೇರಿ 11 ಮಂದಿ ದುರ್ಮರಣ

ಕಣಿವೆ ನಾಡು ಜಮ್ಮು ಮತ್ತು ಕಾಶ್ಮೀರದಲ್ಲಿ ವರುಣನ ಆರ್ಭಟದಿಂದ ಶನಿವಾರ ಮುಂಜಾನೆ ಮೇಘಸ್ಫೋಟ ಹಾಗೂ ಭೂಕುಸಿತ ಸಂಭವಿಸಿದ್ದು, ಐವರು ಮಕ್ಕಳು ಸೇರಿ ಒಂದೇ ಕುಟುಂಬದ 7 ಮಂದಿ ಸೇರಿದಂತೆ 11 ಜನರು ಮೃತಪಟ್ಟಿದ್ದಾರೆ.

ರಿಯಾಸಿ ಜಿಲ್ಲೆಯ ಮಹೋರ್‌ನ ಬದ್ದರ್ ಗ್ರಾಮದಲ್ಲಿ ಶನಿವಾರ ಸಂಭವಿಸಿದ ಭೂಕುಸಿತದಿಂದ ಮನೆ ಬಿದ್ದು ಭೂಕುಸಿತಕ್ಕೆ ಸಿಲುಕಿ 5 ಮಕ್ಕಳು ಸೇರಿ ಒಂದೇ ಕುಟುಂಬದ7 ಜನರು ಸಾವಿಗೀಡಾಗಿದ್ದಾರೆ.

ಮೃತರನ್ನು ನಜೀರ್ ಅಹ್ಮದ್ ರಾಹಿ (38), ಅವರ ಪತ್ನಿ ವಜಾರಾ ಬಾನೋ ಮತ್ತು ಅವರ ಐವರು ಪುತ್ರರಾದ ಬಿಲಾಲ್ ಅಹ್ಮದ್ (12), ಮುಹಮ್ಮದ್ ಮುಸ್ತಫಾ (10), ಮುಹಮ್ಮದ್ ಆದಿಲ್ (8), ಮುಹಮ್ಮದ್ ಮುಬಾರಕ್ (6) ಮತ್ತು ಮುಹಮ್ಮದ್ ವಸೀಮ್ (4) ಎಂದು ಗುರುತಿಸಲಾಗಿದೆ.

ರಾಂಬನ್ ಜಿಲ್ಲೆಯ ರಾಜ್ ಗಡ್ ಹಳ್ಳಿಯಲ್ಲಿ ಶನಿವಾರ ಮುಂಜಾನೆ ಸಂಭವಿಸಿದ ಪ್ರಕೃತಿ ವಿಕೋಪಕ್ಕೆ ನಾಲ್ವರು ಸಾವನ್ನಪ್ಪಿದ್ದು, ಕೆಲವರು ಕಾಣೆಯಾಗಿದ್ದಾರೆ.

ಮೇಘಸ್ಫೋಟ ಹಿನ್ನೆಲೆಯಲ್ಲಿ, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಅಧಿಕಾರಿಗಳು ಕಾಣೆಯಾದವರನ್ನು ಹುಡುಕುತ್ತಿದ್ದಾರೆ ಮತ್ತು ಮೇಘಸ್ಫೋಟದಿಂದ ಹಾನಿಗೊಳಗಾದವರಿಗೆ ತಕ್ಷಣದ ಪರಿಹಾರವನ್ನು ಒದಗಿಸಲಾಗುತ್ತಿದೆ.

ಭೂಕುಸಿತದಲ್ಲಿ ಜನರು ಸಾವನ್ನಪ್ಪಿರುವ ಬಗ್ಗೆ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಜನರು ಜಾಗರೂಕರಾಗಿರಿ, ದುರ್ಬಲ ಪ್ರದೇಶಗಳಲ್ಲಿ ಇರುವುದನ್ನು ತಪ್ಪಿಸಿ, ಸುರಕ್ಷತಾ ಸಲಹೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅವರು ಮನವಿ ಮಾಡಿದ್ದಾರೆ.

ಜಿಲ್ಲಾಡಳಿತ ಮತ್ತು ವಿಪತ್ತು ನಿರ್ವಹಣಾ ಅಧಿಕಾರಿಗಳು ಸ್ಥಳದಲ್ಲಿಯೇ ಇದ್ದು, ದಿನದ 24 ಗಂಟೆಗಳ ಕಾಲ ಮೇಲ್ವಿಚಾರಣೆ ನಡೆಸಬೇಕು. ಅಪಾಯ ಪೀಡಿತ ವಲಯಗಳಿಂದ ನಿವಾಸಿಗಳನ್ನು ಸಕಾಲಿಕವಾಗಿ ಸ್ಥಳಾಂತರಿಸಬೇಕು ಹಾಗೂ ಸಂತ್ರಸ್ತ ಕುಟುಂಬಗಳಿಗೆ ತಕ್ಷಣದ ಪರಿಹಾರ ಮತ್ತು ಸಾಧ್ಯವಿರುವ ಎಲ್ಲ ಸಹಾಯ ಒದಗಿಸಬೇಕೆಂದು ಸಿಎಂ ಒಮರ್ ಅಬ್ದುಲ್ಲಾ ನಿರ್ದೇಶನ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments