ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಡೋನಾಲ್ಡ್ ಟ್ರಂಪ್ ವಿರುದ್ಧ ಹೊರಿಸಿದ್ದ ಎಲ್ಲಾ 34 ಆರೋಪಗಳಲ್ಲೂ ದೋಷಿ ಎಂದು ನ್ಯೂಯಾರ್ಕ್ ನ್ಯಾಯಾಲಯ ಆದೇಶಿಸಿದೆ. ಈ ಮೂಲಕ ಕೋರ್ಟ್ ಶಿಕ್ಷೆಗೆ ಗುರಿಯಾದ ಅಮೆರಿಕದ ಮೊದಲ ಅಧ್ಯಕ್ಷ ಎಂಬ ಕುಖ್ಯಾತಿಗೆ ಪಾತ್ರರಾಗಿದ್ದಾರೆ.
ಅಮೆರಿಕದ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿದ್ದು, ಡೊನಾಲ್ಡ್ ಟ್ರಂಪ್ ಎರಡನೇ ಬಾರಿ ಅಧಿಕಾರ ಹಿಡಿಯುವತ್ತ ದಾಪುಗಾಲಿರಿಸಿದ್ದಾರೆ. ಇದೇ ಸಂದರ್ಭದಲ್ಲಿ ಉದ್ದಿಮೆಯ ಸುಳ್ಳು ಲೆಕ್ಕ ತೋರಿಸಿದ್ದಕ್ಕಾಗಿ ತಪ್ಪಿತಸ್ಥ ಎಂದು ನ್ಯೂಯಾರ್ಕ್ ಜೂರಿ ಆದೇಶ ನೀಡಿದ್ದಾರೆ.
ನೀಲಿಚಿತ್ರ ತಾರೆ ಸ್ಟ್ರೋಮಿ ಡೇನಿಯಲ್ ಅವರಿಗೆ ಹಣ ಸಂದಾಯ ಮಾಡಿರುವುದನ್ನು ಟ್ರಂಪ್ ಮುಚ್ಚಿಟ್ಟಿದ್ದರು. ಉದ್ದಿಮೆಯ ಹಣ ವರ್ಗಾವಣೆಯ ಸುಳ್ಳು ಲೆಕ್ಕ ತೋರಿಸಿದ್ದು ಸೇರಿದಂತೆ ಅವರ ವಿರುದ್ಧದ ಎಲ್ಲಾ 34 ಆರೋಪಗಳು ಸಾಬೀತಾಗಿವೆ.
ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪ್ರತಿಯೊಂದು ಆರೋಪಕ್ಕೂ ತಲಾ 4 ವರ್ಷ ಜೈಲು ಶಿಕ್ಷೆಗೆ 77 ವರ್ಷದ ಟ್ರಂಪ್ ಗುರಿಯಾಗುವ ಸಾಧ್ಯತೆ ಇದೆ. ಆದರೆ ಜೈಲು ಶಿಕ್ಷೆಯಿಂದ ವಿನಾಯಿತಿ ಪಡೆಯುವ ಸಾಧ್ಯತೆಯೂ ಇದೆ.
ಈ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗೆ ಬಂದಿರುವ ಡೊನಾಲ್ಡ್ ಟ್ರಂಪ್, ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಗೆಲುವಿನತ್ತ ಮುನ್ನಡೆದಿದ್ದಾರೆ. ಒಂದು ವೇಳೆ ಅಧ್ಯಕ್ಷರಾಗಿ ಆಯ್ಕೆಯಾದರೆ ಶಿಕ್ಷೆಯಿಂದ ವಿನಾಯಿತಿ ಪಡೆಯಲಿದ್ದಾರೆ.