ಏಷ್ಯಾದಲ್ಲೇ ಅತೀ ದೊಡ್ಡ ಶೋಭಾಯಾತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಚಿತ್ರದುರ್ಗ ಜಿಲ್ಲೆಯ ಹಿಂದೂ ಮಹಾಗಣಪತಿ ಶೋಭಾಯಾತ್ರೆ ಶನಿವಾರ ನಡೆಯಲಿದೆ.
ಭಜರಂಗದಳದ ದಕ್ಷಿಣ ಪ್ರಾಂತ ಸಂಯೋಜಕ ಪ್ರಬಂಜನ್ ಚಿತ್ರದುರ್ಗದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿ ಮಹಾಗಣಪತಿಯ ಶೋಭಾಯಾತ್ರೆಯನ್ನು ಇನ್ನಷ್ಟು ಅದ್ಧೂರಿಯಾಗಿ ಆಚರಿಸುವ ಮೂಲಕ ಇತಿಹಾಸ ಸೃಷ್ಟಿ ಮಾಡಲು ಈಗಾಗಲೇ ಸಿದ್ಧತೆ ನಡೆದಿದೆ ಎಂದರು.
ಶನಿವಾರ ಬೆಳಗ್ಗೆ 10 ಗಂಟೆಗೆ ಜೈನಧಾಮದ ಬಳಿ ಚಾಲನೆ ನೀಡಲಾಗುವುದು. ಈ ಬಾರಿ ಬೃಹತ್ ಶೋಭಾಯಾತ್ರೆಗೆ ಮೈಸೂರಿನ ರಾಜಮನೆತನದ ಯದುವೀರ್ ಒಡೆಯರ್ ಶೋಭಾಯಾತ್ರೆಯನ್ನು ಉದ್ಘಾಟನೆ ಮಾಡುವುದು ಈ ಬಾರಿಯ ವಿಶೇಷ ಎಂದು ಅವರು ಹೇಳಿದರು.
ಉದ್ಘಾಟನೆ ಬಳಿಕ ನಗರದ ಪ್ರಮುಖ ಬೀದಿಗಳಲ್ಲಿ ಸಾಗುವ ಶೋಭಾಯಾತ್ರೆಯಲ್ಲಿ ಮಂಗಳೂರಿನ ಪ್ರಸಿದ್ಧ ಕಲಾವಿದರಿಂದ ನಾಸಿಕ್ ಡೋಲು, ಚಂಡೆ ವಾದ್ಯ, ದಾವಣಗೆರೆ ಹಾಗೂ ಚಿತ್ರದುರ್ಗದ ಡೊಳ್ಳು ಕುಣಿತ, ವೀರಗಾಸೆ, ನಾಸಿಕ್ ಡೋಲು ಸೇರಿದಂತೆ 10ಕ್ಕೂ ಹೆಚ್ಚು ಕಲಾತಂಡಗಳು ಭಾಗಿಯಾಗಲಿದ್ದು, ಈ ಬಾರಿಯ ಶೋಭಾಯಾತ್ರೆಯಲ್ಲಿ ಸುಮಾರು 6ರಿಂದ 7 ಲಕ್ಷ ಜನ ಸೇರುವ ನಿರೀಕ್ಷೆ ಇದೆ ಎಂದರು. ಇನ್ನು ಶೋಭಾಯಾತ್ರೆ ಉದ್ಘಾಟನೆಯಲ್ಲಿ ಸಾಧು ಸಂತರು, ಪಕ್ಷಾತೀತವಾಗಿ ರಾಜಕೀಯ ಗಣ್ಯರು , ಹಿಂದೂ ಸಂಘಟನೆಗಳ ಮುಖಂಡರು ಭಾಗಿಯಾಗಲಿದ್ದಾರೆ. ಈ ಬಾರಿ ತಿರುಪತಿ ತಿಮ್ಮಪ್ಪನ ಮಾಡೆಲ್, ಭಗವಾಧ್ವಜ, ಬೃಹತ್ ಹೂವಿನ ಹಾರಗಳ ಹರಾಜು ಇರುತ್ತದೆ ಎಂದು ಹೇಳಿದರು.
ಡಿಜೆ ಬದಲು ಸ್ಪೀಕರ್ ಅಳವಡಿಕೆ
ಈ ಬಾರಿ ಸರ್ಕಾರ ಹಲವು ನಿಬಂಧನೆಗಳನ್ನು ಹೇರಿದ್ದು, ಸರ್ಕಾರದ ಆದೇಶ ಹಾಗೂ ಕಾನೂನಿನಲ್ಲಿ ಏನು ಅವಕಾಶ ಇದೆಯೋ ಅದೆಲ್ಲವನ್ನು ಸಂಪೂರ್ಣವಾಗಿ ಬಳಸಿಕೊಂಡು ಯಾರ ನಿರೀಕ್ಷೆಯನ್ನು ಹುಸಿಗೊಳಿಸಿದೆ ಶೋಭಾಯಾತ್ರೆ ಯಶಸ್ವಿಗೊಳಿಸುತ್ತೇವೆ ಎಂದು ಹೇಳಿದರು. ಈಗಾಗಲೇ 4 ವಾಹನಗಳಲ್ಲಿ ಸ್ಪೀಕರ್ ಗಳನ್ನು ಅಳವಡಿಕೆ ಮಾಡುತ್ತೇವೆ. ಅದನ್ನು ನಾವು ಡಿಜೆ ಎಂದು ಕರೆಯುವುದಿಲ್ಲ. ಡಿಜೆಗೂ ಸ್ಪೀಕರ್ ಗೂ ವ್ಯತ್ಯಾಸ ಇದೆ. ಆದರೆ ನಾವು ಡಿಜೆಗೆ ತಕ್ಕಂತೆ ಸ್ಪೀಕರ್ ಅಳವಡಿಕೆ ಮಾಡಿ ಬರುವ ಜನರ ನಿರೀಕ್ಷೆಯನ್ನು ನಿರಾಸೆ ಮಾಡೋದಿಲ್ಲ. ಶೋಭಾಯಾತ್ರೆ ವೇಳೆ ಜನರಿಗೆ ಯಾವ ರೀತಿಯ ಸೌಂಡ್ ಬೇಕು ಅದಕ್ಕೆ ತಕ್ಕಂತೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇವೆ. ಜಿಲ್ಲಾಡಳಿತದ ವತಿಯಿಂದ ಸಹ ಅನುಮತಿ ಪಡೆದುಕೊಂಡು ಮುಂದುವರೆಯುತ್ತೇವೆ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಬಂಜನ್ ತಿಳಿಸಿದ್ದಾರೆ.
ಶೋಭಾಯಾತ್ರೆಗೆ ಬಿಗಿ ಬಂದೋಬಸ್ತ್
ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆ ಮತ್ತು ಶೋಭಾಯಾತ್ರೆಗೆ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದ್ದು, 3869 ಪೊಲೀಸ್ ಅಧಿಕಾರಿ, ಸಿಬ್ಬಂದಿ ಹಾಗೂ 30 ವಿಶೇಷ ತುಕಡಿಗಳ ನಿಯೋಜನೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ತಿಳಿಸಿದ್ದಾರೆ.
ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತದ ವತಿಯಿಂದ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಚಿತ್ರದುರ್ಗ ನಗರದಲ್ಲಿ ವ್ಯಾಪಕವಾದ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಚಿತ್ರದುರ್ಗ ಜಿಲ್ಲೆ ಹಾಗೂ ಬೆಂಗಳೂರು ನಗರ ಸೇರಿದಂತೆ ಹೊರಜಿಲ್ಲೆಗಳಿಂದ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿದಂತೆ 9 ಎಎಸ್‍ಪಿ, 28 ಡಿಎಸ್‍ಪಿ, 78 ಪಿಐ, 175 ಪಿಎಸ್‍ಐ, 401 ಎಎಸ್‍ಐ, 2678 ಹೆಚ್.ಸಿ, ಪಿಸಿ, 500 ಹೋಮ್ ಗಾರ್ಡ್ ಹಾಗೂ 16 ತುಕಡಿಗಳು ಕರ್ನಾಟಕ ರಾಜ್ಯ ಸಶಸ್ತ್ರ ಮೀಸಲು ಪಡೆ ಹಾಗೂ 14 ತುಕಡಿಗಳು ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮತ್ತು ರ್ಯಾಪಿಡ್ ಅಕ್ಷನ್ ಪೋಸ್ಟ್ ನಿಯೋಜಿಸಲು ಕ್ರಮಕೈಗೊಳ್ಳಾಗಿದೆ.
151 ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ
ಬಂದೋಬಸ್ತ್ ಕರ್ತವ್ಯದ ಪ್ರಯುಕ್ತ ನಗರದಾದ್ಯಂತ ಪ್ರಮುಖ 151 ಸ್ಥಳಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳು ಮತ್ತು 26 ಕಣ್ಗಾವಲು ವೇದಿಕೆ (Watch Tower) ಗಳನ್ನು ನಿರ್ಮಿಸಲಾಗಿದ್ದು, ಮೆರವಣಿಗೆ ಮಾರ್ಗದಲ್ಲಿನ ವೀಡಿಯೋ ಚಿತ್ರೀಕರಣಕ್ಕೆಂದು 67 ವಿಡಿಯೋ ಕ್ಯಾಮೆರಾಗಳೊಂದಿಗೆ ಸಿಬ್ಬಂದಿಯವರನ್ನು ನಿಯೋಜಿಸಲಾಗಿರುತ್ತದೆ. ಶೋಭಾಯಾತ್ರೆ ಸಾಗುವ ಮಾರ್ಗದಲ್ಲಿನ ಎತ್ತರದ ಕಟ್ಟಡಗಳ ಮೇಲೆ 49 ಸ್ಕೈ ಸೆಂಟ್ರಿಗಳನ್ನು ನಿಯೋಜಿಸಲಾಗಿರುತ್ತದೆ. ಅಲ್ಲದೇ 08 ದ್ರೋಣ್ ಕ್ಯಾಮೆರಾಗಳನ್ನು ನಿಯೋಜಿಸಲಾಗಿರುತ್ತದೆ.
ಶೋಭಾಯಾತ್ರೆ ಮಾರ್ಗದಲ್ಲಿ ಅಳವಡಿಸಲಾಗಿರುವ ಸಿ.ಸಿ.ಕ್ಯಾಮೆರಾಗಳಲ್ಲಿನ ದೃಶ್ಯಾವಳಿಗಳನ್ನು ದಿನದ 24 ಗಂಟೆಗಳ ಕಾಲ ಒಂದೇ ಕಡೆ ವೀಕ್ಷಿಸುವ ಸಲುವಾಗಿ ಎಸ್.ಜೆ.ಎಂ. ಡೆಂಟಲ್ ಕಾಲೇಜ್‍ನಲ್ಲಿ ಕಮಾಂಡ್ ಸೆಂಟರ್ ತೆರೆಯಲಾಗಿರುತ್ತದೆ. ಬಂದೋಬಸ್ತ್‍ನ ಸೆಕ್ಟರ್ ಅಧಿಕಾರಿಗಳ ಸಂವಹನಕ್ಕಾಗಿ ಹೆಚ್ಚುವರಿ ಕಂಟ್ರೋಲ್ ರೂಂ ತೆರೆಯಲಾಗಿರುತ್ತದೆ. ಶೋಭಾಯಾತ್ರೆಗೆ ಸಮಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಸಂಬಂಧವಾಗಿ 03 ಸೆಕ್ಟರಲ್ ಮ್ಯಾಜಿಸ್ಟ್ರೇಟ್‍ಗಳನ್ನು ನಿಯೋಜಿಸಲು ಕ್ರಮ ಕೈಗೊಳ್ಳಲಾಗಿರುತ್ತದೆ.
ಸಹಾಯವಾಣಿ ಕೇಂದ್ರ ಆರಂಭ
ಶಾಂತಿ ಕದಡುವ ಬಗ್ಗೆ ಮಾಹಿತಿ ಇದ್ದರೆ, ಇ.ಅರ್.ಎಸ್.ಎಸ್. ದೂರವಾಣಿ ಸಂಖ್ಯೆ:112, ಜಿಲ್ಲಾ ನಿಸ್ತಂತು ಕೇಂದ್ರ ಮೊ.ನಂ: 9480803100 ಮತ್ತು ದೂರವಾಣಿ ಸಂಖ್ಯೆ: 08194-222782 ಗಳಿಗೆ ಕರೆ ಮಾಡಬಹುದು.



