ಗದಗ: ಜಾತಿ ಗಣತಿ ವಿಷಯದಲ್ಲಿ ವೀರಶೈವ ಮಹಾಸಭೆಯ ಹೇಳಿಕೆಗೂ ಕರ್ನಾಟಕ ರಾಜ್ಯ ಪಂಚಮಸಾಲಿ ಸಂಘಕ್ಕೂ ಯಾವುದೇ ಸಂಬಂಧವಿಲ್ಲ. ಜಾಗತೀಕ ಮಹಾಸಭಾ, ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಹಾಗೂ ಪಂಚಮಸಾಲಿಗೂ ಸಂಬಂಧವಿಲ್ಲ. ಕರ್ನಾಟಕ ರಾಜ್ಯ ಪಂಚಮಸಾಲಿ ಸಂಘವಿದೆ. ಪಂಚಮಸಾಲಿ ಪೀಠಗಳಿವೆ. ಪೀಠದ ಮಾತುಗಳಿಗೆ ಸಮಾಜದವರು ಬದ್ದರಾಗಿರಬೇಕು. ಸೆಪ್ಟಂಬರ್ 17ಕ್ಕೆ ಹುಬ್ಬಳ್ಳಿಯಲ್ಲಿ ನಿರ್ಣಾಯ ಸಭೆ ಮಾಡುತ್ತಿದ್ದೇವೆ ಅಂತ ಹರಿಹರ ಪೀಠದ ವಚನಾನಂದ ಶ್ರೀಗಳು ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯಾದ್ಯಂತ ಈಗಾಗಲೇ 11 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದು, ಇನ್ನೂ 8 ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದೇವೆ. ಭಕ್ತರ ಜೊತೆ ಸಮಾಲೋಚನೆ ನಡೆಸಲಿದ್ದೇವೆ. ನಾಗಮೋಹನದಾಸ್ ಆಯೋಗದಲ್ಲಿ 161 ಜಾತಿಗಳು ಹೊಸದಾಗಿ ಸೇರಿವೆ. ಮೊದಲು 2 ಪಂಚಮಸಾಲಿಗಳಿದ್ದವು. ಈಗ ಜೈನ ಪಂಚಮಸಾಲಿ ಅಂತ ಹೊಸದಾಗಿ ಸೇರ್ಪಡೆ ಮಾಡಲಾಗಿದೆ. ಹಿಂದೂಳಿದ ವರ್ಗಗಳ ಆಯೋಗಕ್ಕೆ ಇದು ಎಲ್ಲಿ ಸಿಕ್ಕಿತೊ ಅಂತ ತಿಳಿಯುತ್ತಿಲ್ಲ. ಸಮೀಕ್ಷೆ ಮಾಡುವಾಗ ಪರಿಷ್ಕರಣೆ ಮಾಡಬೇಕು ಅಂತ ಆಗ್ರಹಿಸಿದರು.
ಕೂಡಲಸಂಗಮದ ಬಸವಜಯ ಮೃತ್ಯುಂಜಯ ಮಹಾಸ್ವಾಮೀಜಿಗಳು, ಹಿರಿಯರು, ಶಿಕ್ಷಣ ತಜ್ಞರು, ಕಾನೂನು ಸಲಹೆಗಾರರು, ಯುವಕರು, ಮಹಿಳೆಯರು ಸೇರಿ ನಿರ್ಣಾಯಕ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಇಲ್ಲಿಯವರೆಗೆ ನಮ್ಮ ಸಮುದಾಯ ಉಪಯೋಗದ ವಸ್ತುವಾಗಿತ್ತು. ಪಂಚಮಸಾಲಿಗಳನ್ನು ಉಪಯೋಗಿಸಿ ಅವರವರ ಜಾತಿಗೆ ಅನುಕೂಲ ಮಾಡಿದ್ದಾರೆ. ಸಣ್ಣ ಕಮಿನಿಟಿಯವರು ನಮ್ಮನ್ನು ಆಳುತ್ತಿದ್ದಾರೆ. ಇನ್ನು ಮುಂದೆ ಅದು ನಡೆಯುವುದಿಲ್ಲ. ಪಂಚಮಸಾಲಿ ಧರ್ಮಪಿಠಗಳು ಹೇಳಿದಂತೆ ಕೇಳಿಕೊಂಡು ನಿರ್ಣಾಯಕ ಸಭೆ ನಡೆಸಲಿದ್ದೇವೆ ಎಂದರು.
ಆಯೋಗದ ವರದಿಯಲ್ಲಿ ಎ 0868 ಲಿಂಗಾಯತ ಪಂಚಮಸಾಲಿ ಮತ್ತು ಎ 1526 ವೀರಶೈವ ಪಂಚಮಸಾಲಿ ಅಂತ ನಮೂದಾಗಿದೆ. ಈ ಬಗ್ಗೆ ಸಮಾಲೋಚನೆ ನಡೆಯುತ್ತಿದೆ. ರಾಜ್ಯದ ಎಲ್ಲ ಜಿಲ್ಲೆ, ತಾಲ್ಲೂಕ, ಹೋಬಳಿ ಮಟ್ಟದ ಮುಖಂಡರ ಅಭಿಪ್ರಾಯ ಸಂಗ್ರಹಿಸಿ ಸ್ಪಷ್ಟತೆಯನ್ನು ಸಮಾಜಕ್ಕೆ ತಿಳಿಸುತ್ತೇವೆ. 2014 ರಿಂದ 2017 ರ ಸಮೀಕ್ಷೆಯಲ್ಲಿ 10 ಲಕ್ಷ ಜನಸಂಖ್ಯೆ ತೋರಿಸಲಾಗಿದೆ. ಆದರೆ, 1990 ರಲ್ಲಿ 84ಲಕ್ಷ ಜನಸಂಖ್ಯೆ ಹೊಂದಿದ್ದೇವು. ಆದ್ದರಿಂದ ಆ ವರದಿಯನ್ನು ಈಗಾಗಲೇ ತಿರಸ್ಕರಿಸಲಾಗಿದೆ. ಭಕ್ತರು ಮೊದಲು ಜಾಣರಾಗಬೇಕು ಅಂತ ಕಿವಿಮಾತು ಹೇಳಿದರು.



