Thursday, June 25, 2026
Google search engine
Homeರಾಜ್ಯಸಚಿವ ಜಾರ್ಜ್ ಕಾಫಿ ತೋಟಕ್ಕೆ ನುಗ್ಗಿದ ಮೂವರು ಬಂದೂಕುಧಾರಿಗಳ ಬಂಧನ

ಸಚಿವ ಜಾರ್ಜ್ ಕಾಫಿ ತೋಟಕ್ಕೆ ನುಗ್ಗಿದ ಮೂವರು ಬಂದೂಕುಧಾರಿಗಳ ಬಂಧನ

ಚಿಕ್ಕಮಗಳೂರು: ಸಚಿವ ಕೆಜೆ ಜಾರ್ಜ್ ಅವರಿಗೆ ಸೇರಿದ ಕಾಫಿ ತೋಟಕ್ಕೆ ಬಂದೂಕುಧಾರಿಗಳು ನುಗ್ಗಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದ್ದು, ಸಿಸಿಟಿವಿ ದೃಶ್ಯ ಆಧರಿಸಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ತಾಲೂಕಿನ ಮಲ್ಲಂದೂರು ಸಮೀಪದ ಏಳುನೂರು ಖಾನ್ ಕಾಫಿ ತೋಟದಲ್ಲಿ ಬಂದೂಕು ಹಿಡಿದಿದ್ದ ಗುಂಪು ಓಡಾಡಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮಲ್ಲಂದೂರು ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಜೂನ್ 17, 21 ಹಾಗೂ 22ರ ಮಧ್ಯರಾತ್ರಿ ವೇಳೆ ಅಪರಿಚಿತರು ಬಂದೂಕು ಹಾಗೂ ಇತರೆ ಮಾರಕಾಸ್ತ್ರಗಳೊಂದಿಗೆ ತೋಟದೊಳಗೆ ಓಡಾಡುತ್ತಿರುವ ದೃಶ್ಯಗಳು ದಾಖಲಾಗಿದ್ದವು. ಮುತ್ತೋಡಿ ಅಭಯಾರಣ್ಯಕ್ಕೆ ಹೊಂದಿಕೊಂಡಿರುವ ಈ ತೋಟದಲ್ಲಿ ನಡೆದ ಚಟುವಟಿಕೆಗಳು ಸಿಬ್ಬಂದಿ ಹಾಗೂ ತೋಟದ ಆಡಳಿತ ವರ್ಗದಲ್ಲಿ ಆತಂಕ ಮೂಡಿಸಿದ್ದವು.

ಅಕ್ರಮ ಪ್ರವೇಶ ಮಾಡಿದವರ ನಡೆ-ನುಡಿಗಳು ಅನುಮಾನಕ್ಕೆ ಕಾರಣವಾಗಿದ್ದರಿಂದ ಕಾನೂನು ಬಾಹಿರ ಚಟುವಟಿಕೆ ಅಥವಾ ಕಾಡು ಪ್ರಾಣಿಗಳ ಬೇಟೆಗೆ ಬಂದಿರಬಹುದೆಂಬ ಶಂಕೆ ವ್ಯಕ್ತವಾಗಿತ್ತು.

ತೋಟದ ಹಿರಿಯ ವ್ಯವಸ್ಥಾಪಕಿ ದಿವ್ಯ ಮಲ್ಲಂದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ಪೊಲೀಸರು, ತನಿಖೆ ಆರಂಭಿಸಿ ಶೋಧ ಕಾರ್ಯಾಚರಣೆ ನಡೆಸಿದರು.

ತನಿಖೆಯ ವೇಳೆ ತೋಟದಮಕ್ಕಿ ಗ್ರಾಮದ ನಿವಾಸಿಗಳಾದ ಪುಟ್ಟಸ್ವಾಮಿ, ಗಿರೀಶ್ ಹಾಗೂ ರಮೇಶ್ ಎಂಬ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಾಥಮಿಕ ವಿಚಾರಣೆಯಲ್ಲಿ ಮುತ್ತೋಡಿ ಅಭಯಾರಣ್ಯಕ್ಕೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಕಾಡು ಪ್ರಾಣಿಗಳ ಬೇಟೆಯ ಉದ್ದೇಶದಿಂದ ಅವರು ತೆರಳಿದ್ದ ಸಾಧ್ಯತೆಗಳ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಪ್ರಕರಣದಲ್ಲಿ ರವಿ ಸೇರಿದಂತೆ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಿ ಶೋಧ ಕಾರ್ಯ ಮುಂದುವರಿಸಲಾಗಿದೆ. ವಶಕ್ಕೆ ಪಡೆದ ಆರೋಪಿಗಳಿಂದ ಕೆಲ ಮಹತ್ವದ ಮಾಹಿತಿ ಲಭ್ಯವಾಗುವ ನಿರೀಕ್ಷೆಯಿದ್ದು, ಬೇಟೆಗೆ ಬಳಸಲಾದ ಶಸ್ತ್ರಾಸ್ತ್ರಗಳ ಮೂಲ ಹಾಗೂ ಉದ್ದೇಶದ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಆರೋಪಿಗಳ ಬಂಧನದ ಬಳಿಕ ಪ್ರಕರಣದ ಸಂಪೂರ್ಣ ಚಿತ್ರಣ ಹೊರಬೀಳುವ ಸಾಧ್ಯತೆ ಇದೆ. ಈ ಘಟನೆ ಕಾಫಿನಾಡಿನಲ್ಲಿ ಮತ್ತೆ ಅಕ್ರಮ ಬೇಟೆ ಹಾಗೂ ಅರಣ್ಯ ಪ್ರದೇಶಗಳ ಭದ್ರತೆ ಕುರಿತ ಚರ್ಚೆಗೆ ಕಾರಣವಾಗಿದೆ.

ಎಸ್ಟೇಟ್ ಮ್ಯಾನೇಜರ್ ದಿವ್ಯ ನೀಡಿದ ದೂರು ಆಧರಿಸಿ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ. ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಶೋಧಕಾರ್ಯ ಕೂಡ ಮುಂದುವರಿಸಲಾಗಿದೆ. ಬಂದೂಕು ಹಿಡಿದು ತೋಟಕ್ಕೆ ಯಾಕೆ ಪ್ರವೇಶ ಮಾಡಿದರು ಹಾಗೂ ಇವರ ಉದ್ದೇಶ ಏನು ಎಂದು ಎಲ್ಲಾ ಆಯಾಮಗಳಿಂದಲೂ ತನಿಖೆ ಮಾಡಲಾಗುತ್ತಿದೆ. ತನಿಖೆ ಪೂರ್ಣಗೊಂಡ ನಂತರವೇ ಸತ್ಯ ಹೊರ ಬರಬೇಕಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments