ಕಾರಕಾಸ್: ವೆನೆಜುವೆಲಾದಲ್ಲಿ ಎರಡು ಬಾರಿ ಸಂಭವಿಸಿದ ಪ್ರಬಲ ಭೂಕಂಪನದಿಂದ ಮೃತಪಟ್ಟವರ ಸಂಖ್ಯೆ 164ಕ್ಕೆ ಏರಿಕೆಯಾಗಿದ್ದು, 1000 ಮಂದಿ ಗಾಯಗೊಂಡಿದ್ದಾರೆ.
ಸ್ಥಳೀಯ ಸಮಯ ಸಂಜೆ 6 ಗಂಟೆಗೆ ವೆನೆಜುವೆಲಾದ ಒಂದೇ ಪ್ರದೇಶದಲ್ಲಿ ಎರಡು ಭೂಕಂಪಗಳು ಅಲ್ಪ ಸಮಯದ ಅಂತರದಲ್ಲಿ ಸಂಭವಿಸಿದವು. 7.2 ಮತ್ತು 7.5 ಪ್ರಮಾಣದ ಭೂಕಂಪನಗಳಿಂದಾಗಿ ರಾಜಧಾನಿಯಲ್ಲಿ ಅನೇಕ ಕಟ್ಟಡಗಳು ನೆಲಕ್ಕುರುಳಿವೆ. ಇದರಿಂದಾಗಿ ಜನರು ಮನೆಗಳಿಂದ ಭಯಭೀತರಾಗಿ ಹೊರಗೆ ಓಡಿ ಬಂದಿದ್ದಾರೆ.
ಹಲವಾರು ಕಟ್ಟಡಗಳು ಧರೆಗುರುಳಿದ್ದು, ಸಾವಿನ ಸಂಖ್ಯೆ 164ಕ್ಕೆ ಏರಿಕೆಯಾಗಿದ್ದು, ಮತ್ತಷ್ಟು ಏರುವ ಭೀತಿ ಇದೆ. ಗಾಯಗೊಂಡ 1000ಕ್ಕೂ ಅಧಿಕ ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
39 ಸೆಕೆಂಡ್ ಗಳ ಅಂತರದಲ್ಲಿ ಎರಡು ಪ್ರಬಲ ಭೂಕಂಪನದ ನಂತರ ಸುಮಾರು 20 ಬಾರಿ ಭೂಕಂಪನಗಳು ಆಗಿವೆ. ಇದರಿಂದ ರಸ್ತೆಗಳು ಬಿರುಕುಬಿಟ್ಟಿದ್ದು, ನಗರದ ಬಹುತೇಕ ಕಟ್ಟಡಗಳು ಧರೆಗುರುಳಿವೆ. ಇದರಿಂದ ವಿಮಾನ ನಿಲ್ದಾಣ ಕೂಡ ಬಂದ್ ಮಾಡಲಾಗಿದೆ.
ಮೊದಲ ಭೂಕಂಪವು 7.2 ತೀವ್ರತೆಯನ್ನು ಹೊಂದಿತ್ತು. ದೇಶದ ಕೆರಿಬಿಯನ್ ಕರಾವಳಿಯಲ್ಲಿರುವ ಮೊರೊನ್ ಸಮುದಾಯದ ಪಶ್ಚಿಮದಲ್ಲಿ ಭೂಕಂಪದ ಕೇಂದ್ರ ಬಿಂದು ಇತ್ತು ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ. ಭೂಕಂಪವು 22 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ.
ಕೇವಲ ಒಂದು ನಿಮಿಷದ ನಂತರ 7.5 ತೀವ್ರತೆಯ ಇನ್ನೂ ದೊಡ್ಡ ಭೂಕಂಪ ಸಂಭವಿಸಿದೆ ಎಂದು USGS ವರದಿ ಮಾಡಿದೆ. ಎರಡನೇ ಭೂಕಂಪವು 10 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ ಮತ್ತು ಅದರ ಕೇಂದ್ರಬಿಂದುವು ಮೊರೊನ್‌ನ ನೈಋತ್ಯಕ್ಕೆ 16 ಕಿಲೋಮೀಟರ್ (10 ಮೈಲುಗಳು) ದೂರದಲ್ಲಿತ್ತು ಎಂದು ಅದು ವರದಿ ಮಾಡಿದೆ.
ಸಾವಿನ ಸಂಖ್ಯೆ ಕ್ಷಣ ಕ್ಷಣಕ್ಕೂ ಏರಿಕೆಯಾಗುತ್ತಿದ್ದು, ಸಾವಿನ ಸಂಖ್ಯೆ 1000 ದಾಟಿದರೂ ಅಚ್ಚರಿ ಇಲ್ಲ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬುಧವಾರ ಸಂಜೆ ಸುಮಾರು 20 ಕಂಪನಗಳು ಸಂಭವಿಸಿವೆ. ತ್ರುಜಿಲ್ಲೋ, ಕರಬೋಬೋ, ಮಿರಾಂಡಾ ಮತ್ತು ಲಾ ಗ್ವೈರಾ ರಾಜ್ಯಗಳಲ್ಲಿ ಹೆಚ್ಚಿನ ಹಾನಿ ಸಂಭವಿಸಿವೆ. ಆದರೆ ಇದುವರೆಗೂ ಸಾವು – ನೋವಿನ ಬಗ್ಗೆ ನಿಖರವಾದ ವರದಿಗಳಾಗಿಲ್ಲ. ಹಲವರು ಭೂಕಂಪದಿಂದಾಗಿ ಗಾಯಗೊಂಡಿರುವುದಾಗಿ ವರದಿ ಆಗಿದೆ.
ತುರ್ತು ಪರಿಸ್ಥಿತಿ ಘೋಷಣೆ
ನಗರದಾದ್ಯಂತ ಕಟ್ಟಡಗಳು ನಾಶವಾಗಿವೆ. ಈ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ಧಾರೆ. ಗಂಭೀರ ಹಾನಿಯಿಂದಾಗಿ ದೇಶದ ಪ್ರಮುಖ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ ಎಂದು ವೆನೆಜುವೆಲಾದ ಹಂಗಾಮಿ ಅಧ್ಯಕ್ಷೆ ಡೆಲ್ಸಿ ರಾಡ್ರಿಗಸ್ ಘೋಷಿಸಿದ್ದಾರೆ.
ವೆನೆಜುವೆಲಾದಲ್ಲಿ ಇತ್ತೀಚೆಗೆ ಸಂಭವಿಸಿದ ಕಂಪನಗಳಲ್ಲಿ ಅತ್ಯಂತ ಶಕ್ತಿಶಾಲಿ ಭೂಕಂಪವಾಗಿದೆ. 1997 ರಲ್ಲಿ ಈಶಾನ್ಯ ಭಾಗದಲ್ಲಿ ಸಂಭವಿಸಿದ ಭೂಕಂಪದಲ್ಲಿ 73 ಜನರು ಮೃತಪಟ್ಟಿದ್ದರು. 1967 ರಲ್ಲಿ ಕಾರಕಾಸ್‌ನಲ್ಲಿ ಸಂಭವಿಸಿದ ಭೂಕಂಪದಲ್ಲಿ 236 ಜನರು ಪ್ರಾಣ ಕಳೆದುಕೊಂಡಿದ್ದರು. ಲಾಸ್ ಪಾಲೋಸ್ ಗ್ರಾಂಡಿಸ್ ಪ್ರದೇಶವು 1967ರ ಭೂಕಂಪದಲ್ಲೂ ತುಂಬಾ ಹಾನಿಗೊಳಗಾಗಿತ್ತು.



