ಆರಂಭಿಕ ಅಭಿಷೇಕ್ ಶರ್ಮ ಸಿಡಿಲಬ್ಬರದ ಅರ್ಧಶತಕ ಹಾಗೂ ಬೌಲರ್ ಗಳ ಮಾರಕ ದಾಳಿ ಸಹಾಯದಿಂದ ಭಾರತ ತಂಡ 41 ರನ್ ಗಳ ಭಾರೀ ಅಂತರದಿಂದ ಬಾಂಗ್ಲಾದೇಶ ತಂಡವನ್ನು ಸೋಲಿಸಿ ಏಷ್ಯಾಕಪ್ ಟಿ-20 ಟೂರ್ನಿಯಲ್ಲಿ ಫೈನಲ್ ಗೆ ಲಗ್ಗೆ ಹಾಕಿದೆ.
ದುಬೈನಲ್ಲಿ ಬುಧವಾರ ನಡೆದ ಸೂಪರ್-4 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 168 ರನ್ ಸಂಪಾದಿಸಿತು. ಕಠಿಣ ಗುರಿ ಬೆಂಬತ್ತಿದ ಬಾಂಗ್ಲಾದೇಶ 19.3 ಓವರ್ ಗಳಲ್ಲಿ 127 ರನ್ ಗೆ ಆಲೌಟಾಯಿತು. ಈ ಮೂಲಕ ಭಾರತ ಸೋಲರಿಯದ ತಂಡವಾಗಿ ಪ್ರಶಸ್ತಿ ಸುತ್ತು ಪ್ರವೇಶಿಸಿತು.
ಬಾಂಗ್ಲಾದೇಶ ಪರ ಆರಂಭಿಕ ಸೈಫ್ ಹಸನ್ 51 ಎಸೆತಗಳಲ್ಲಿ 3 ಬೌಂಡರಿ ಮತ್ತು 5 ಸಿಕ್ಸರ್ ಸಹಾಯದಿಂದ 69 ರನ್ ಬಾರಿಸಿ ಏಕಾಂಗಿ ಹೋರಾಟ ನಡೆಸಿದರೆ ಮತ್ತೊಂದು ತುದಿಯಲ್ಲಿ ಬ್ಯಾಟ್ಸ್ ಮನ್ ಗಳು ಹೊಡಿಬಡಿ ಆಟಕ್ಕೆ ಮುಂದಾಗಿ ವಿಕೆಟ್ ಕೈಚೆಲ್ಲಿದರು. ಇದರಿಂದ ಭಾರತ ಹಲವಾರು ಜೀವದಾನ ನೀಡಿದರೂ ಬಾಂಗ್ಲಾ ಗೆಲುವಿನ ಸಮೀಪವೂ ಬಾರದೇ ಕೈಚೆಲ್ಲಿತು.
ಭಾರತದ ಪರ ಸ್ಪಿನ್ನರ್ ಕುಲದೀಪ್ ಯಾದವ್ 3 ವಿಕೆಟ್ ಪಡೆದರೆ, ಜಸ್ ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ ತಲಾ 2 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಭಾರತ ತಂಡದ ಪರ ಭರ್ಜರಿ ಫಾರ್ಮ್ ನಲ್ಲಿರುವ ಅಭಿಷೇಕ್ ಶರ್ಮ 37 ಎಸೆತಗಳಲ್ಲಿ 6 ಬೌಂಡರಿ ಮತ್ತು 5 ಸಿಕ್ಸರ್ ಸಿಡಿಸಿ 75 ರನ್ ಬಾರಿಸಿದ್ದಾಗ ಇಲ್ಲದ ರನ್ ಕದಿಯುವ ಆತುರದಲ್ಲಿ ವಿಕೆಟ್ ಕೈಚೆಲ್ಲಿದರು. ಶುಭಮನ್ ಗಿಲ್ 29 ರನ್ ಬಾರಿಸಿದರೆ, ಹಾರ್ದಿಕ್ ಪಾಂಡ್ಯ 29 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 38 ರನ್ ಸಿಡಿಸಿದರು.



