ತಿರುವನಂತಪುರ: ಕೇಂದ್ರ ಕೇರಳಂನ ಹಲವೆಡೆ ಭಾರಿ ಮಳೆಯಿಂದ ಪ್ರವಾಹ, ಭೂಕುಸಿತ ಸಂಭವಿಸಿದ್ದು, ಈ ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಎಂದು ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್‌ಡಿಎಂಎ) ಮಾಹಿತಿ ಹಂಚಿಕೊಂಡಿದೆ.
ಕೇಂದ್ರ ಕೇರಳಂನಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಇಡುಕ್ಕಿ ಹಾಗೂ ಕೊಟ್ಟಾಯಂನಲ್ಲಿ ಭೂಕುಸಿತ ಸಂಭವಿಸಿದೆ. ಪತ್ತನಂತಿಟ್ಟ ಜಿಲ್ಲೆಯ ಕೆಲವು ಕಡೆಗಳಲ್ಲಿ ಪ್ರವಾಹ ಉಂಟಾಗಿದ್ದು ಹಲವು ಪ್ರದೇಶಗಳು ಮುಳುಗಡೆಯಾಗಿವೆ.
ಕಳೆದ ಒಂದು ದಿನದಲ್ಲಿ ಈ ಭಾಗದಲ್ಲಿ ಸುಮಾರು 302 ಮಿ.ಮೀಗೂ ಹೆಚ್ಚು ಮಳೆಯಾಗಿದೆ ಎಂದು ಕೆಎಸ್‌ಡಿಎಂಎ ಸದಸ್ಯ ಕಾರ್ಯದರ್ಶಿ ಶೇಖರ್ ಲುಕೋಸ್ ಕುರಿಯಾಕೋಸ್ ಶೇಖರ್ ಮಾಹಿತಿ ಹಂಚಿಕೊಂಡಿದ್ದಾರೆ.
ಗುಡ್ಡಗಾಡು ಪ್ರದೇಶದ ಸಮೀಪವಿರುವ ನಿವಾಸಿಗಳನ್ನು ಸುರಕ್ಷಿತ ಪ್ರದೇಶಗಳಿಗೆ ವರ್ಗಾಯಿಸಲಾಗಿದೆ. ತಗ್ಗು ಪ್ರದೇಶದಲ್ಲಿ ವಾಸಿಸುತ್ತಿದ್ದವರಿಗೆ ಮಳೆಗಾಲದ ಆರಂಭದಲ್ಲೇ ಎಚ್ಚರಿಸಲಾಗಿತ್ತು.
ರಾಜ್ಯದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಒಂದೆರಡು ದಿನದಲ್ಲಿ ಮಳೆ ಕಡಿಮೆ ಆಗುವ ಸಾಧ್ಯತೆ ಇದೆ. ಆದರೆ ಉತ್ತರ ಭಾಗಗಳಲ್ಲಿ ಇನ್ನೂ ಕೆಲವು ದಿನ ಹೆಚ್ಚಿನ ಮಳೆಯಾಗಬಹುದು ಎಂದು ಅವರು ತಿಳಿಸಿದ್ದಾರೆ.



