ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಗೆ ಜೈಲಿನಲ್ಲಿ ಸೌಲಭ್ಯ ನೀಡುವ ಕುರಿತು ಬೆಂಗಳೂರು 57ನೇ ಸೆಷನ್ಸ್ ನ್ಯಾಯಾಲಯ ಅಕ್ಟೋಬರ್ 9ಕ್ಕೆ ತೀರ್ಪು ಕಾಯ್ದಿರಿಸಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿರುವ ನಟ ದರ್ಶನ್ ಗೆ ಈ ಹಿಂದೆ ನ್ಯಾಯಾಲಯ ಸವಲತ್ತು ನೀಡುವ ಆದೇಶವನ್ನು ಜೈಲಿನ ಅಧಿಕಾರಿಗಳು ಪಾಲಿಸುತ್ತಿಲ್ಲ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ದರ್ಶನ್ ಪರ ಅರ್ಜಿಯ ವಿಚಾರಣೆಯನ್ನು ಮಂಗಳವಾರ ಪೂರ್ಣಗೊಳಿಸಲಾಯಿತು.
ದರ್ಶನ್ ಗೆ ಜೈಲಿನ ನಿಯಮಗಳ ಅಡಿಯಲ್ಲಿಯೇ ಹಾಸಿಗೆ, ದಿಂಬು ನೀಡಬೇಕು. ಹೊರಗೆ ಸುತ್ತಾಡಲು ಅವಕಾಶ ನೀಡಬೇಕು ಎಂದು ನ್ಯಾಯಾಲಯ ಆದೇಶಿಸಿತ್ತು. ಆದರೆ ಈ ಆದೇಶವನ್ನು ಪೂರ್ಣವಾಗಿ ಪಾಲಿಸಿಲ್ಲ ಎಂದು ದರ್ಶನ್ ಪರ ವಕೀಲರು ವಾದಿಸಿದರು.
ಈ ವೇಳೆ ಸರ್ಕಾರದ ಪರ ವಕೀಲ ಪ್ರಸನ್ನ ಕುಜಮಾರ್, ಜೈಲಿನಲ್ಲಿ ಕೇಳಿದ್ದನ್ನು ಕೊಟ್ಟಿದ್ದೇವೆ. ಪಲ್ಲಂಗ ಕೇಳಿದರೆ ಕೊಡಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು. ಈ ವೇಳೆ ನಾವು ಚಿನ್ನದ ಮಂಚ ಕೊಡಿ ಎಂದು ಕೇಳಿಲ್ಲ ಎಂದು ಪ್ರತಿವಾದಿಸಿದರು.
ಸರ್ಕಾರಿ ವಕೀಲರಿಗೆ ಇಂಗ್ಲೀಷ್ ಸರಿಯಾಗಿ ಬರಲ್ಲ ಎಂದು ಅನಿಸುತ್ತಿದೆ. ನಾವು ಕೇಳಿದ್ದನ್ನು ಅವರು ಅರ್ಥ ಮಾಡಿಕೊಂಡಿಲ್ಲ ಎಂದಾಗ ದರ್ಶನ್ ಪರ ಹಾಗೂ ಸರ್ಕಾರಿ ವಕೀಲರ ನಡುವೆ ವಾದ-ಪ್ರತಿವಾದ ಜಟಾಪಟಿ ನಡೆಯಿತು. ಈ ವೇಳೆ ನ್ಯಾಯಾಲಯದ ಘನತೆಗೆ ತಕ್ಕಂತೆ ವಾದ ಮಾಡುವಂತೆ ನ್ಯಾಯಾಧೀಶರು ಸೂಚಿಸಿದರು.
ಕಾಮುಕ ಉಮೇಶ್ ರೆಡ್ಡಿಗೆ ಕಲರ್ ಟಿವಿ ನೀಡಿದ್ದಾರೆ. ಜೈಲಿನಲ್ಲಿ ವಿವಿಐಪಿ ಕೈದಿಗಳಿಗೆ ಐಷಾರಾಮಿ ಸಲವತ್ತುಗಳನ್ನು ನೀಡಲಾಗಿದೆ. ಆದರೆ ದರ್ಶನ್ ಕೇಳಿದ ಕನಿಷ್ಠ ಸೌಲಭ್ಯ ನೀಡುತ್ತಿಲ್ಲ. ಉಗ್ರರು ಇರುವ ಸೆಲ್ ನಲ್ಲಿ ದರ್ಶನ್ ಅವರನ್ನು ಇರಿಸಲಾಗಿದೆ ಎಂದು ದರ್ಶನ್ ಪರ ವಕೀಲರು ಆರೋಪಿಸಿದರು.
ಜೈಲಿನಲ್ಲಿ ಸಾಮಾನ್ಯ ಮತ್ತು ವಿಶೇಷ ಎಂಬ ಎರಡು ವಿಭಾಗಗಳಿದ್ದು, ಕ್ವಾರಂಟೈನ್ ಸೆಲ್ ನಲ್ಲಿ ಇಡಲು ಅವಕಾಶವಿದ್ದು, ಅಲ್ಲಿ ಅವರನ್ನು ಇರಿಸಲಾಗಿದೆ ಎಂದು ಸರ್ಕಾರದ ಪರ ವಕೀಲರು ವಾದಿಸಿದರು.
ಕೊರೊನಾ ಕಾಲದಲ್ಲಿ ಇದ್ದ ಕ್ವಾರಂಟೈನ್ ಸೆಲ್ ನಲ್ಲಿ 14 ದಿನ ಮಾತ್ರ ಇಡಬಹುದು. ಆದರೆ ಇದುವರೆಗೂ ಅವರನ್ನು ಅಲ್ಲಿಯೇ ಇರಿಸಲಾಗಿದೆ. ಅವರಿಗೆ ಬಿಸಿಲಿನಲ್ಲಿ ಓಡಾಡಲು ಅವಕಾಶ ನೀಡಿದ್ದರೂ ಹೊರಗೆ ಹೋಗಲು ಬಿಡದೇ ಬ್ಯಾರಿಕೇಡ್ ಒಳಗೆ ಸಂಚಾರಕ್ಕೆ ಅರ್ಧ ಗಂಟೆ ಅವಕಾಶ ಮಾತ್ ನೀಡಲಾಗಿದೆ ಎಂದು ದರ್ಶನ್ ಪರ ವಕೀಲರು ಆರೋಪಿಸಿದರು.



