ಜಗದ್ವಿಖ್ಯಾತ ಮೈಸೂರು ದಸರಾ ವೀಕ್ಷಸಲು ದೇಶ-ವಿದೇಶಗಳಿಂದ ಪ್ರವಾಸಿಗರು ಭೇಟಿ ನೀಡಿದ್ದೂ ಅಲ್ಲದೇ ಆನ್ ಲೈನ್ ನಲ್ಲಿ 1.33 ಕೋಟಿ ಜನರು ವೀಕ್ಷಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.
ದಸರಾದ ಅಧಿಕೃತ ವೆಬ್‌ಸೈಟ್‌ನ ಮೂಲಕ ನೇರವಾಗಿ ಪ್ರಸಾರಗೊಂಡ ಜಂಬೂ ಸವಾರಿ ಮೆರವಣಿಗೆಯನ್ನು ವೆಬ್‌ಸೈಟ್‌ನಲ್ಲಿ ನೇರವಾಗಿ ಪ್ರಸರಣೆ ಮಾಡುವುದರೊಂದಿಗೆ, ಜಿಲ್ಲಾಡಳಿತ ಮತ್ತು ಸಿಎಂ ಅವರ ಅಧಿಕೃತ ಜಾಲತಾಣ ಸೇರಿದಂತೆ ಸರ್ಕಾರದ 22 ಅಧಿಕೃತ ಜಾಲತಾಣಗಳಿಗೂ ಸಂಪರ್ಕ ಕಲ್ಪಿಸಲಾಗಿತ್ತು.
ಸಾಮಾನ್ಯವಾಗಿ ಮೈಸೂರು ದಸರಾ 9 ದಿನಗಳ ಕಾಲ ನಡೆಯುತ್ತದೆ. ಆದರೆ ಈ ಬಾರಿ 11 ದಿನಗಳ ಕಾಲ ಅದ್ಧೂರಿಯಾಗಿ ದಸರಾ ಆಚರಿಸಲಾಗಿದೆ. ಆನ್‌ಲೈನ್ ದಸರಾ ವೀಕ್ಷಣೆ ಈ ಬಾರಿ ಶೇ. 30 ರಷ್ಟು ಹೆಚ್ಚಳವಾಗಿದೆ. ಕಳೆದ ವರ್ಷ ಅಂದರೆ 2024ರ ದಸರಾ ಮಹೋತ್ಸವದ ಕಾರ್ಯಕ್ರಮಗಳನ್ನು ನೇರವಾಗಿ 97 ಲಕ್ಷ ಮಂದಿ ಆನ್‌ಲೈನ್ ಮೂಲಕ ವೀಕ್ಷಿಸಿದ್ದರು. ಈ ಬಾರಿ ವೀಕ್ಷಕರ ಸಂಖ್ಯೆ ಬರೋಬ್ಬರಿ 1.33 ಕೋಟಿ ದಾಟಿರುವುದು ದಾಖಲೆಯಾಗಿದೆ.
ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯನ್ನು ಈ ಬಾರಿ ಆನ್ ಲೈನ್ ನಲ್ಲಿ ದಾಖಲೆ ಸಂಖ್ಯೆಯ 22 ಲಕ್ಷ ಜನರು ವೀಕ್ಷಿಸಿದ್ದಾರೆ. ಕಳೆದ ಬಾರಿಗೆ ಹೋಲಿಸಿದರೆ 1 ಲಕ್ಷ ಹೆಚ್ಚು ಜನರು ವೀಕ್ಷಿಸಿದ್ದಾರೆ.
ಕಳೆದ ವರ್ಷ 2024 ರಲ್ಲಿ ನಡೆದ ಜಂಬೂ ಸವಾರಿ ಮೆರವಣಿಗೆಯನ್ನು 21 ಲಕ್ಷ ಮಂದಿ ವೀಕ್ಷಣೆ ಮಾಡಿದ್ದರೆ, 2023ರಲ್ಲಿ ನಡೆದ ಮೆರವಣಿಗೆಯನ್ನು 16 ಲಕ್ಷ ಮಂದಿ ಮಾತ್ರ ವೀಕ್ಷಣೆ ಮಾಡಿದ್ದರು.
ಅರಮನೆ ಆವರಣದಲ್ಲಿ ಜಂಬೂಸವಾರಿಯ ದಿನ ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿಯ ಮೂರ್ತಿಯನ್ನು ಹೊತ್ತ ಅಭಿಮನ್ಯುವಿನ ನೇತೃತ್ವದಲ್ಲಿ ನಡೆದ ಮೆರವಣಿಗೆಯನ್ನು ಮಾರ್ಗದುದ್ದಕ್ಕೂ ಲಕ್ಷಾಂತರ ಮಂದಿ ಕಣ್ತುಂಬಿಕೊಂಡಿದ್ದಾರೆ.
ಜಂಬೂ ಸವಾರಿ ಮೆರವಣಿಗೆಯನ್ನು ನೇರವಾಗಿ ಕಣ್ತುಂಬಿಕೊಳ್ಳಲು ಸಾಧ್ಯವಾಗದ ಮೈಸೂರು ಸೇರಿದಂತೆ ದೇಶ-ವಿದೇಶದಲ್ಲಿನ ಸಾರ್ವಜನಿಕರು ಹಾಗೂ ಪ್ರವಾಸಿಗರು, ದಸರಾ ವೆಬ್‌ಸೈಟ್‌ನಲ್ಲಿ ನೇರವಾಗಿ ಪ್ರಸಾರಗೊಂಡಿರುವುದನ್ನ ಕಣ್ತುಂಬಿಕೊಂಡಿದ್ದಾರೆ ಎಂದು ದಸರಾ ವೆಬ್‌ಸೈಟ್ ನಿರ್ವಹಣೆ ಮಾಡುತ್ತಿರುವ ಫ್ಯೂಜನ್ ಮೈಂಡ್ ಟೆಕ್ನಾಲಜೀಸ್‌ನ ನಿರ್ದೇಶಕ ಯಶವಂತ್ ಕುಮಾರ್ ತಿಳಿಸಿದ್ದಾರೆ.
ಈ ಬಾರಿಯ ದಸರಾದಲ್ಲಿ ಹೆಚ್ಚಿನ ಕಾರ್ಯಕ್ರಮಗಳಿಗೆ ಆನ್‌ಲೈನ್ ವೀಕ್ಷಣೆಗೆ ಅವಕಾಶ ಕಲ್ಪಿಸಿದ್ದರಿಂದ ದಸರಾ ವೆಬ್‌ಸೈಟ್ ವೀಕ್ಷಕರ ಸಂಖ್ಯೆ ಹೆಚ್ಚಾಗಿದೆ. ಏರ್ ಶೋ, ಡ್ರೋನ್ ಶೋ ಕಾರ್ಯಕ್ರಮಗಳ ನೇರ ಪ್ರಸಾರಕ್ಕೆ ಅವಕಾಶ ಸಿಕ್ಕಿದ್ದು, ವೀಕ್ಷಕರ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ ಎಂದು ಹೇಳಿದ್ದಾರೆ.
ಯುವ ದಸರಾ ಪ್ರಸಾರ ಕಡಿತ!
ಐದು ದಿನಗಳ ಕಾಲ ನಡೆದ ಯುವ ದಸರಾ ಕಾರ್ಯಕ್ರಮದಲ್ಲಿ ಎರಡು ದಿನಗಳು ಮಾತ್ರ ನೇರ ಪ್ರಸಾರಕ್ಕೆ ಅವಕಾಶ ನೀಡಿ ಬಳಿಕ ಸ್ಥಗಿತಗೊಳಿಸಲಾಯಿತು. ಮುಂದಿನ ದಿನಗಳಿಗೂ ನೇರ ಪ್ರಸಾರಕ್ಕೆ ಅವಕಾಶ ನೀಡಿದ್ದರೆ ಇನ್ನೂ ಒಂದೆರಡು ಲಕ್ಷ ವೀಕ್ಷಕರ ಸಂಖ್ಯೆ ಹೆಚ್ಚಾಗುತ್ತಿತ್ತು ಎಂದು ಅಧಿಕಾರಿಗಳು ವಿಶ್ಲೇಷಿಸಿದ್ದಾರೆ.
ಈ ಬಾರಿಯ ದಸರಾದಲ್ಲಿ ಹೆಚ್ಚಿನ ಕಾರ್ಯಕ್ರಮಗಳ ನೇರ ಪ್ರಸಾರಕ್ಕೆ ಅವಕಾಶ ಕಲ್ಪಿಸಿದ್ದರಿಂದ ವ್ಯವಸ್ಥಿತವಾಗಿ ಲೈವ್ ಮಾಡಲಾಗಿದೆ. ಸರ್ಕಾರದ ಎಲ್ಲಾ ಅಧಿಕೃತ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಸರಣ ಮಾಡಲಾಗಿದೆ ಎಂದು ಹೇಳಿದ್ದಾರೆ.



