ಪೋಕ್ಸೋ ಪ್ರಕರಣದ ಆರೋಪಿ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಕಟ್ಟಡದಿಂದ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.
ಕೆ.ಆರ್.ಪುರ ಆಕಾಶನಗರದ ನಿವಾಸಿ ಗೌತಮ್ ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಯ ಬಳಿಕ ಕುಟುಂಬಸ್ಥರಿಗೆ ಶವ ಹಸ್ತಾಂತರಿಸಲಾಗಿದೆ.
ಗೌತಮ್ ಸಂಬಂಧಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ. ಈತನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿದ್ದ ಆಡುಗೋಡಿ ಪೊಲೀಸರು ಕಳೆದ ಏಪ್ರಿಲ್ನಲ್ಲಿ ಬಂಧಿಸಿ ಜೈಲಿಗೆ ಕಳಿಸಿದ್ದರು.
3ನೇ ತ್ವರಿತಗತಿ ವಿಶೇಷ ನ್ಯಾಯಾಲಯದಲ್ಲಿ ಗುರುವಾರ ವಿಚಾರಣೆ ನಿಗದಿಯಾಗಿತ್ತು. ನ್ಯಾಯಾಂಗ ಬಂಧನದಲ್ಲಿದ್ದ ಗೌತಮ್ ಜೊತೆಗೆ ಮತ್ತೊಂದು ಪ್ರಕರಣದ ಆರೋಪಿಯನ್ನು ಪೊಲೀಸರು ಪರಪ್ಪನ ಅಗ್ರಹಾರ ಜೈಲಿನಿಂದ ಬೆಳಗ್ಗೆ ನ್ಯಾಯಾಲಯಕ್ಕೆ ಕರೆತಂದಿದ್ದರು.
ಆರೋಪಿಗಳನ್ನು ಕೈಕೊಳ ಧರಿಸಿಯೇ ಕೋರ್ಟ್ಗೆ ಕರೆತರಲಾಗಿತ್ತು. ಬಳಿಕ ಕೋರ್ಟ್ ಹಾಲ್ನಲ್ಲಿ ಕೈಕೊಳವನ್ನು ಪೊಲೀಸರು ಬಿಚ್ಚಿದ್ದರು. ವಿಚಾರಣೆ ಮುಗಿಸಿ ಹೊರಬಂದ ಗೌತಮ್, ಕುಟುಂಬಸ್ಥರನ್ನು ಕಂಡು ತೀರ ಬೇಸರಕ್ಕೆ ಒಳಗಾಗಿದ್ಧಾನೆ. ಏಕಾಏಕಿ ಪೊಲೀಸರಿಂದ ತಪ್ಪಿಸಿಕೊಂಡು ಕಟ್ಟಡದ 5ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ,ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಹಲಸೂರು ಗೇಟ್ ಪೊಲೀಸರು ಧಾವಿಸಿ ತಪಾಸಣೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ಧಾರೆ.



