ಬೆಂಗಳೂರು: ಮಾಟ ಬಿಡಿಸಿ ನಿಧಿ ತೆಗೆಸಿ ನೀಡುವುದಾಗಿ ನಂಬಿಸಿ ಚಿನ್ನಾಭರಣಗಳನ್ನು ಕಳವು ಮಾಡಿದ್ದ ಕಪಟ ಮಂತ್ರವಾದಿಯನ್ನು ಬಂಧಿಸಿರುವ ಹುಳಿಮಾವು ಪೊಲೀಸರು 53 ಲಕ್ಷ ಮೌಲ್ಯದ 485.4 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಕೋಲಾರದ ಜಮಾಲ್ ಶಾ ನಗರದ ದಾದಾಪೀರ್ (49) ಬಂಧಿತ ಆರೋಪಿಯಾಗಿದ್ದಾನೆ. ಆತನಿಂದ 53 ಲಕ್ಷ ಮೌಲ್ಯದ 485.4 ಗ್ರಾಂ ಚಿನ್ನಾಭರಣಗಳನ್ನು ಜಪ್ತಿ ಮಾಡಿ ಹುಳಿಮಾವು,2 ಭದ್ರಾವತಿ, ಬಳ್ಳಾರಿ ತಲಾ 1 ಸೇರಿ 4 ಕಳವು ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ತನ್ನನ್ನು ತಾನು ನಾರಾಯಣ, ವೆಂಕಟರಮಣ ಮತ್ತಿತರ ಹೆಸರುಗಳಲ್ಲಿ ಪರಿಚಯಿಸಿಕೊಳ್ಳುತ್ತಿದ್ದ ಆರೋಪಿ, ಸ್ವಾಮೀಜಿಯ ಸೋಗಿನಲ್ಲಿ ಅಮಾಯಕರನ್ನು ನಂಬಿಸುತ್ತಿದ್ದ. ಮತ್ತು ತಾನು ಮಾಟ ಮಂತ್ರ ನಿವಾರಣೆ, ನಿಧಿ ದೊರಕಿಸಿಕೊಡಲು ಪೂಜೆ ಮಾಡುತ್ತೇನೆ ಎಂದು ನಂಬಿಸುತ್ತಿದ್ದ. ನಿರ್ದಿಷ್ಟ ದಿನಗಳವರೆಗೂ ವಿಶೇಷ ಪೂಜೆ ಮಾಡುವುದಾಗಿ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಇರಿಸುವಂತೆ ಅವರಿಗೆ ಸೂಚಿಸುತ್ತಿದ್ದ. ಬಳಿಕ ಮನೆಯವರನ್ನು ಯಾಮಾರಿಸಿ ಚಿನ್ನಾಭರಣಗಳ ಸಮೇತ ಕಾಲ್ಕೀಳುತ್ತಿದ್ದ ಎಂದು ಹೇಳಿದರು.
ಬನ್ನೇರುಘಟ್ಟ ಮುಖ್ಯರಸ್ತೆಯ ಕೋಳಿ ಫಾರಂ ಗೇಟ್ ಬಸ್ ನಿಲ್ದಾಣದ ಬಳಿ ವ್ಯಕ್ತಿಯೊಬ್ಬ ಅನುಮಾನಸ್ಪದವಾಗಿ ನಿಂತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ತಕ್ಷಣ ಪೊಲೀಸರು ಸ್ಥಳಕ್ಕೆ ಹೋಗಿ ಆ ವ್ಯಕ್ತಿಯನ್ನು ವಿಚಾರಿಸಿದಾಗ ತಾನು ಕೋಲಾರದವನು ಎಂದು ಹೇಳಿದ್ದಾನೆ. ಆತನ ಬಳಿ ಇದ್ದ ಬ್ಯಾಗ್ ಪರಿಶೀಲಿಸಿ ಅದರಲ್ಲಿದ್ದ ಚಿನ್ನಾಭರಣಗಳ ಬಗ್ಗೆ ವಿಚಾರಿಸಿದಾಗ ಕಳವು ಮಾಡಿರುವುದಾಗಿ ಹೇಳಿದ್ದು, ಈ ಆಭರಣಗಳನ್ನು ಮಾರಾಟ ಮಾಡಲು ಗಿರಾಕಿ ಹುಡುಕುತ್ತಿದ್ದುದಾಗಿ ಹೇಳಿದ್ದಾನೆ.
ಆತನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದು ಹೆಚ್ಚಿನ ವಿಚಾರಣೆ ನಡೆಸಿದಾಗ ಸಾರ್ವಜನಿಕರನ್ನು ಮರಳು ಮಾಡಿ ಮಾಟಮಂತ್ರ ಮಾಡಿರುವುದನ್ನು ಬಿಡಿಸುವುದಾಗಿ ಹಾಗೂ ನಿಧಿ ತೆಗೆದು ಕೊಡುವುದಾಗಿ ಮನವೊಲಿಸಿ ಆಭರಣಗಳನ್ನು ಪೂಜೆಗೆಂದು ಇರಿಸಿ ನಂತರ ಅವುಗಳನ್ನು ಅವರಿಗೆ ಗೊತ್ತಾಗದ ರೀತಿ ಕಳ್ಳತನ ಮಾಡಿದ್ದಾಗಿ ತಿಳಿಸಿದ್ದಾನೆ.
ಕಳವು ಮಾಡಿದ ಆಭರಣಗಳ ಪೈಕಿ ಅರ್ಧದಷ್ಟು ಆಭರಣಗಳನ್ನು ಕೋಲಾರದ ತನ್ನ ವಾಸದ ಮನೆಯಲ್ಲಿ ಇಟ್ಟಿರುವುದಾಗಿ, ಉಳಿದ ಚಿನ್ನಾಭರಣಗಳನ್ನು ನಗರದ ಬಿಟಿಎಂ ಲೇಔಟ್‌ನ ಜ್ಯುವೆಲರಿ ಅಂಗಡಿ ಹಾಗೂ ಮಹಾರಾಷ್ಟ್ರದ ನಾಗಪುರದಲ್ಲಿರುವ ಜ್ಯುವೆಲರಿ ಅಂಗಡಿಯೊಂದರಲ್ಲಿ ಅಡವಿಟ್ಟಿರುವುದಾಗಿ ಹೇಳಿದ್ದಾನೆ.
ತನಿಖೆಯನ್ನು ಮುಂದುವರೆಸಿದ ಪೊಲೀಸರು ಆ ಅಂಗಡಿಗಳಿಂದ ಸುಮಾರು 53 ಲಕ್ಷ ರೂ. ಮೌಲ್ಯದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯ ಬಂಧನದಿಂದ ಹುಳಿಮಾವು ಪೊಲೀಸ್ ಠಾಣೆಯ ಎರಡು ಪ್ರಕರಣ, ಭದ್ರಾವತಿ ಮತ್ತು ಬಳ್ಳಾರಿ ಪೊಲೀಸ್ ಠಾಣೆಯ ತಲಾ ನಾಲ್ಕು ಕಳವು ಪ್ರಕರಣಗಳನ್ನು ಪತ್ತೆಹಚ್ಚುವಲ್ಲಿ ಇನ್‌ಸ್ಪೆಕ್ಟರ್ ಕುಮಾರಸ್ವಾಮಿ ಹಾಗೂ ಸಿಬ್ಬಂದಿ ತಂಡ ಯಶಸ್ವಿಯಾಗಿದೆ.
ಆರೋಪಿ ವಿರುದ್ಧ ಆಂಧ್ರಪ್ರದೇಶದಲ್ಲಿ ಮೂರು ಪ್ರಕರಣ, ಹೊಸಕೋಟೆ ಮತ್ತು ಶಿವಮೊಗ್ಗದಲ್ಲಿ ತಲಾ ಒಂದು ಪ್ರಕರಣ, ಗಿರಿನಗರ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ.



