ಬೆಂಗಳೂರು ಬೆಚ್ಚಿಬೀಳುವಂತೆ ಮಾಡಿದ್ದ ತ್ರಿವಳಿ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಮಗಳನ್ನು ಪೊಲೀಸರು ಪುದುಚೇರಿಯಲ್ಲಿ ಬಂಧಿಸಿದ್ದು, ಪ್ರಿಯಕರನಿಗಾಗಿ ಹುಡುಕಾಟ ನಡೆಸಿದ್ದಾರೆ.
ಪ್ರಿಯಕರನೊಂದಿಗೆ ಸೇರಿ ತಂದೆ – ತಾಯಿ ಹಾಗೂ ತಂಗಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಶ್ವೇತಾ (೨೫)ಳನ್ನು ಪುದುಚೇರಿ ರೈಲ್ವೆ ನಿಲ್ದಾಣದ ಬಳಿ ಬಂಧಿಸಿದ್ದು, ಪ್ರಿಯಕರ ಕೆನತ್ ತಪ್ಪಿಸಿಕೊಂಡಿದ್ದಾರೆ.
ಸೀಗೇಹಳ್ಳಿಯಲ್ಲಿ ಡಾಮಿನಿಕ್ ಲೇಔಟ್ ನ ಸಾಯಿ ಗ್ರೀನ್ ಹೋಮ್ಸ್ ಅಪಾರ್ಟ್ ಮೆಂಟ್ ನಲ್ಲಿ ಚಾಕುವಿನಿಂದ ಇರಿದು ತಂದೆ ಸೋಮಸುಂದರ್ (52) ಅವರ ಪತ್ನಿ ಮತ್ತುಲಕ್ಷ್ಮಿ (48) ಹಾಗೂ ಕಿರಿಯ ಪುತ್ರಿ ಸುಪ್ರಿಯಾ (19) ಎಂಬವರನ್ನು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದರು. ಇಬ್ಬರೂ ಹೊರಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಕೆನತ್ ಜೊತೆ ಎರಡು ತಿಂಗಳುಗಳಿಂದ ಹಿರಿಯ ಪುತ್ರಿ ಶ್ವೇತಾ ವಾಸಿಸುತ್ತಿರುವುದಕ್ಕೆ ಸೋಮಸುಂದರ್ ದಂಪತಿ ಆಕ್ಷೇಪ ವ್ಯಕ್ತಪಡಿಸಿದ್ದರು. ಮಗಳನ್ನು ಭೇಟಿಯಾಗಲು ಬಂದಿದ್ದ ಪೋಷಕರೊಂದಿಗೆ ಸೋಮವಾರ ಸಂಜೆ ಶ್ವೇತಾ ಜಗಳ ಮಾಡಿಕೊಂಡಿದ್ದಳು. ಅದೇ ಸಮಯದಲ್ಲಿ ಆರೋಪಿಗಳು ಚಾಕುವಿನಿಂದ ಇರಿದು ಮುತ್ತುಲಕ್ಷ್ಮಿ ಹಾಗೂ ಸುಪ್ರಿಯಾಳನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು.
ಅದೇ ವೇಳೆ ತಪ್ಪಿಸಿಕೊಂಡು ಹೊರಬಂದಿದ್ದ ಸೋಮಸುಂದರ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರಾದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದರು. ಕೃತ್ಯ ಎಸಗಿದ ಬಳಿಕ ಆರೋಪಿಗಳಾದ ಕೆನತ್ ಹಾಗೂ ಶ್ವೇತಾ ಮನೆಯಿಂದ ಪರಾರಿಯಾಗಿದ್ದರು. ಬಳಿಕ ಮಾರ್ಗ ಮಧ್ಯೆ ಇಬ್ಬರೂ ಪ್ರತ್ಯೇಕವಾಗಿದ್ದರು. ಸದ್ಯ ಶ್ವೇತಾಳನ್ನು ಬಂಧಿಸಲಾಗಿದೆ.
ಹತ್ಯೆ ನಡೆದ ಮನೆ ಶೋಧದ ವೇಳೆ ಶ್ವೇತಾಳ ಡೈರಿ ಪತ್ತೆಯಾಗಿದೆ. ಹಲವು ದಿನಗಳಿಂದ ಡೈರಿ ಬರೆಯುತ್ತಿದ್ದ ಶ್ವೇತಾ, ‘ಐ ಆ್ಯಮ್ ಸ್ಯಾಡ್, ಐ ಆ್ಯಮ್ ಲೋನ್ಲಿ, ಫೀಲಿಂಗ್ ಲವ್ಡ್, ಐ ಆ್ಯಮ್ ಡಿಪ್ರೆಸ್ಡ್, ಐ ಆ್ಯಮ್ ಸೂಪಿರಿಯರ್’ ಎಂದು ಬರೆದಿರುವುದು ಪತ್ತೆಯಾಗಿದೆ. ಇದೀಗ ಶ್ವೇತಾ ಬಂಧನವಾಗಿದ್ದು ಆಕೆಯ ಪ್ರಿಯಕರನಿಗಾಗಿ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ.
ಪ್ರಾಥಮಿಕ ವಿಚಾರಣೆ ಸಂದರ್ಭದಲ್ಲಿ “ನನ್ನ ಪೋಷಕರು ನನ್ನ ಜೀವನವನ್ನೇ ಕಂಟ್ರೋಲ್ ಮಾಡುತ್ತಿದ್ದರು, ಯಾವ ಸ್ವಾತಂತ್ರ್ಯವೂ ಇರಲಿಲ್ಲ. ಆದ್ದರಿಂದ ತಾನೇ ಹತ್ಯೆ ಮಾಡಿರುವುದಾಗಿ” ಶ್ವೇತಾ ತಿಳಿಸಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆರೋಪಿಗಳಾದ ಶ್ವೇತಾ ಹಾಗೂ ಕೆನತ್ ನ್ಯೂ ಹಾರಿಜನ್ ಕಾಲೇಜಿನಲ್ಲಿ ಇಬ್ಬರು ಒಟ್ಟಿಗೆ ಬಿ.ಟೆಕ್ ವ್ಯಾಸಂಗ ಮಾಡಿದ್ದರು. ಖಾಸಗಿ ಕಂಪನಿಯಲ್ಲಿ ಇಬ್ಬರು ಟೆಕ್ಕಿಗಳಾಗಿದ್ದು, ವರ್ಕ್ ಫ್ರಮ್ ಹೋಮ್ ನಲ್ಲಿದ್ದರು. ಇಬ್ಬರು ಲಿವಿಂಗ್ ಇನ್ ರಿಲೇಷನ್ ನಲ್ಲಿದ್ದು, ಎರಡು ತಿಂಗಳ ಹಿಂದೆ ಸಾಯಿ ಗ್ರೀನ್ ಅಪಾರ್ಟ್ಮೆಂಟ್ನಲ್ಲಿ ಬಾಡಿಗೆ ಬಂದಿದ್ದರು. ವೈಯಕ್ತಿಕ ಕಾರಣಕ್ಕಾಗಿ ಪೋಷಕರೊಂದಿಗೆ ವೈಮನಸ್ಸು ಮೂಡಿದ್ದರಿಂದ ತನ್ನ ಇರುವಿಕೆಗೆ ಬಗ್ಗೆ ಯುವತಿ ಆರಂಭದಲ್ಲಿ ಮರೆಮಾಚಿದ್ದಳು. ನಿರಂತರ ಸಂಪರ್ಕ ಬಳಿಕ ಪೋಷಕರಿಗೆ ತಾನಿರುವ ಸ್ಥಳದ ಬಗ್ಗೆ ಮಾಹಿತಿ ನೀಡಿದ್ದಳು.
ಬ್ಯಾಂಕ್ವೊಂದರಲ್ಲಿ ಶ್ವೇತಾ ಸುಮಾರು ₹30 ಲಕ್ಷ ಸಾಲ ಪಡೆದಿದ್ದಳು ಎನ್ನಲಾಗಿದ್ದು, ಸರಿಯಾಗಿ ಮಾಸಿಕ ಕಂತು ಪಾವತಿಸದ ಕಾರಣ ಮಾರತ್ ಹಳ್ಳಿಯಲ್ಲಿರುವ ತಂದೆಯ ಮನೆಗೆ ಬ್ಯಾಂಕ್ ನೋಟಿಸ್ ಬಂದಿದ್ದವು. ಅಲ್ಲದೆ, ಮೊಬೈಲ್ ಸಾಲ ಮರುಪಾವತಿ ಬಗ್ಗೆ ಸಂದೇಶ ಬಂದಿತ್ತು. ಭಾನುವಾರ ತಾಯಿ ಮುತ್ತುಲಕ್ಷ್ಮೀ ಮನೆಗೆ ಕರೆಯಿಸಿಕೊಂಡಿದ್ದಳು.
ಪ್ರಿಯಕರನೊಂದಿಗೆ ಇರುವುದನ್ನು ನೋಡಿ ಬೈದು ಬುದ್ಧಿ ಹೇಳಿದ್ದಕ್ಕೆ ಕೋಪಗೊಂಡ ಆಕೆ ಪ್ರಿಯಕರನ ಜೊತೆ ಸೇರಿ ಚಾಕುವಿಂದ ತಾಯಿ ಮುತ್ತುಲಕ್ಷ್ಮೀಯನ್ನು ಹತ್ಯೆಗೈದಿದ್ದಾರೆ. ಬಳಿಕ ಊಟಕ್ಕಾಗಿ ಮನೆಗೆ ಬರುವಂತೆ ತಂದೆ ಹಾಗೂ ತಂಗಿಯನ್ನು ಆಹ್ವಾನಿಸಿ ಪೂರ್ವ ಸಂಚಿನಂತೆ ಚಾಕುವಿನಿಂದ ಸಾಯಿಸಿ ನಿನ್ನೆ ರಾತ್ರಿ ಬೈಕ್ವೊಂದರ ಮೂಲಕ ಎಸ್ಕೇಪ್ ಆಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.



