ಬೆಂಗಳೂರು: ಗ್ರಾಹಕರ ಸೋಗಿನಲ್ಲಿ ಬಂದು ದರೋಡೆಗೆ ಯತ್ನಿಸಿ ಚಿನ್ನದಂಗಡಿ ಮಾಲೀಕನ ಮೇಲೆ ಗುಂಡು ಹಾರಿಸಿರುವ ಘಟನೆ ನೆಲಮಂಗಲ ತಾಲೂಕಿನ ಡಾಬಸ್‌ಪೇಟೆಯ ಪ್ರೇಮ್ ಶಿವ ಜ್ಯುವೆಲರಿ ಅಂಗಡಿಯಲ್ಲಿ ನಡೆದಿದೆ.
ಪ್ರೇಮ್ ಶಿವ ಜ್ಯುವೆಲರಿ ಅಂಗಡಿಗೆ ಬುಲೆರೋ ಕಾರಿನಲ್ಲಿ ಬಂದಿದ್ದ ಐದಾರು ಮಂದಿ ದುಷ್ಕರ್ಮಿಗಳು ಮೊದಲು ಗ್ರಾಹಕರ ಸೋಗಿನಲ್ಲಿ ಅಂಗಡಿಗೆ ಚಿನ್ನಾಭರಣಗಳನ್ನು ತೋರಿಸುವಂತೆ ಮಾತುಕತೆ ನಡೆಸಿದ ಬಳಿಕ, ಅಂಗಡಿಯೊಳಗೆ ಇದ್ದ ಇಬ್ಬರು ಅಪರಿಚಿತರು ಏಕಾಏಕಿ ಗನ್‌ಗಳನ್ನ ಹೊರತೆಗೆದು ದಾಳಿ ನಡೆಸಿದ್ದಾರೆ.
ದರೋಡೆ ಯತ್ನವನ್ನು ಅಂಗಡಿ ಮಾಲೀಕ ಪುನ್ನಾರಾಮ್ (ಕುನ್ನಾರಾಮ್) ಪ್ರತಿರೋಧಿಸಿದ ವೇಳೆ ಆರೋಪಿಗಳು ಗುಂಡು ಹಾರಿಸಿದ್ದಾರೆ. ಗುಂಡೇಟಿನಿಂದ ಗಾಯಗೊಂಡ ಅವರನ್ನ ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನಾ ಸ್ಥಳಕ್ಕೆ ಡಾಬಸ್‌ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಎರಡು ಜೀವಂತ ಗುಂಡುಗಳು ಪತ್ತೆಯಾಗಿದ್ದು, ಅವುಗಳನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ. ಆರೋಪಿಗಳ ಪತ್ತೆಗೆ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿ ದಾಳಿಕೋರರ ಗುರುತು ಮತ್ತು ಪರಾರಿಯಾದ ಮಾರ್ಗಗಳ ಕುರಿತು ತನಿಖೆ ಮುಂದುವರಿಸಿದ್ದಾರೆ.



